೭ ದಶಕಗಳು ನವಲಗುಂದಕ್ಕೆ ನೀರುಣಿಸಿದ ನೀಲಮ್ಮನ ಕೆರೆ ಈಗ ಇತಿಹಾಸ ಪುಟಕ್ಕೆ.

Tuesday, February 24, 2009

ನೀರಿಗೂ ನವಲಗುಂದಕ್ಕೂ ದಶಕಗಳ ಎಣ್ಣೆ-ಸೀಗಿಕಾಯಿ ಸಂಬಂಧ! ಕುಡಿಯುವ ನೀರಿನ ಬರ ಎಂದರೆ ನವಲಗುಂದದ್ದು ಎಂಬುವಷ್ಟು ಜನಜನಿತ ಇಲ್ಲಿನ ಪರಿಸ್ಥಿತಿ. 'ನೀರಿಲ್ಲದ ಊರು ನವಲಗುಂದ' ಕ್ಕೆ ಕುಡಿಯುವ ನೀರಿನ ಕೆರೆಯನ್ನು ೧೯೩೮ರಲ್ಲಿ ಕಟ್ಟಿಸಿ, ಪುಣ್ಯ ಕಟ್ಟಿಕೊಂಡವರು ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯರ ಸಹೋದರಿ ನೀಲಮ್ಮನವರು. ಅನೇಕ ದಶಕಗಳಿಂದ ಇಡೀ ನವಲಗುಂದ ಊರಿಗೆ ಅವರ ಹೆಸರಿನಲ್ಲಿಯೇ ಇರುವ ಈ ಕೆರೆ ಜೀವದಾಯಿಯಾಗಿತ್ತು. ಶಿರಸಂಗಿಯ ಲಿಂಗರಾಜ ದೇಸಾಯರು ತಮ್ಮ ತಂಗಿ ನೀಲಮ್ಮನವರಿಗೆ ೧೯ ಎಕರೆ ಜಮೀನನ್ನು ಕಾಣಿಕೆಯಾಗಿ ನೀಡಿದ್ದರು. ಆದರೆ ಈ ತಾಯಿ ನವಲಗುಂದದ ಜನಕ್ಕೆ ಸ್ವಚ್ಛ ಕುಡಿಯುವ ನೀರು ಒದಗಿಸುವ ಘನ ಉದ್ದೇಶದಿಂದ ತಮ್ಮ ಜಮೀನಿನಲ್ಲಿಯೇ ದೊಡ್ಡ ಕೆರೆಯನ್ನು ನಿರ್ಮಿಸಿದರು. ಜನತೆಗೆ ಕುಡಿಯುವ ನೀರನ್ನು ಒದಗಿಸಿ ಅವಿಸ್ಮರಣೀಯ ಕಾರ್ಯ ಮಾಡಿದರು.

ಕಾರಣ ನವಲಗುಂದ ಪುರಸಭೆ ಮನೆಗಳಿಗೆ 'ಶಾಸ್ತ್ರಕ್ಕೆ' ಎಂಬುವಂತೆ ತಲುಪಿಸುತ್ತಿದ್ದ ನಲ್ಲಿಯ ನೀರು ಬಳಸಲು ಸಹ ಅಯೋಗ್ಯವಾದ ಕಹಿ ನೀರಾಗಿತ್ತು. ಇನ್ನು ಆ ನೀರನ್ನು ಕುಡಿಯಲು ಬಳಸಿದರೆ.. ಅಡ್ಡ ಪರಿಣಾಮಗಳನ್ನು ದೇವರೆ ಬಲ್ಲ. ಹಾಗಾಗಿ ಜನರೆಲ್ಲ ಈ ನೀಲಮ್ಮನ ಕೆರೆಯ ನೀರನ್ನೇ ನಂಬಿ ಬದುಕಿದ್ದರು. ಬೆಳಗಾಗುತ್ತಲೇ 'ಯಾರ್ಯಾರ ನೆನೆಯಲಿ' ಬದಲು 'ಯಾವ ಯಾವ ಬಣ್ಣದ ಕೊಡ ಇಂದು ಬಳಸಿ ನೀರು ಹೊರಲಿ' ಎಂಬಂತೆ ಸುಪ್ರಭಾತ ಮನೆ ಮನೆಗಳಲ್ಲಿ ಕೇಳುತ್ತಿತ್ತು. ಜನ ನೂರಾರು ಕೊಡಗಳನ್ನು ಟ್ರ್ಯಾಕ್ಟರ್, ಬಂಡಿ, ತಳ್ಳುವ ಗಾಡಿ, ಮೋಟಾರ್ ಸೈಕಲ್, ಸೈಕಲ್ ಹೀಗೆ ಹತ್ತು ಹಲವಾರು ವಿಧದಲ್ಲಿ ನೀರು ಹೊರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದರು.

ಊರಿನ ಶ್ರೀಮಂತರಿಗಾದರೆ ಹಣ ಕೊಟ್ಟು ಕುಡಿಯುವ ನೀರು ಪಡೆಯುವ ಭಾಗ್ಯವಿತ್ತು. ಆದರೆ ಬಡವರಿಗೆ ನೀಲಮ್ಮನಕೆರೆ ಆಧಾರವಾಗಿತ್ತು. ಈಗ ಅದು ಇತಿಹಾಸದ ಪುಟಗಳನ್ನು ಸೇರುವ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾರಣ ನವಲಗುಂದಕ್ಕೆ ಈಗ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಂಡು ಮನೆ ಮನೆಗಳಿಗೆ ನಲ್ಲಿಯ ಮೂಲಕ ಒಳ್ಳೆಯ ನೀರು ಸರಬರಾಜಾಗತೊಡಗಿದೆ. ಹಾಗಾಗಿ ನೀಲಮ್ಮನ ಕೆರೆ ಅವಜ್ಞೆಗೆ ಒಳಗಾಗಿದೆ. ಮೊದಲು ಪುರಸಭೆಯೇ ಈ ಕೆರೆಯ ಸುಪರ್ದಿ ವಹಿಸಿತ್ತು. ಕೆರೆಯನ್ನು ಕಾಯಲು ಕಾವಲುಗಾರರನ್ನು ನಿಯುಕ್ತಿಗೊಳಿಸಿತ್ತು. ಕೆರೆಯ ಮುಂಭಾಗದಲ್ಲಿ ಸುಂದರ ಕಮಾನು ನಿಲ್ಲಿಸಿ ನೀಲಮ್ಮನ ಜಲಾಶಯ ಎಂದು ಫಲಕ ಕೂಡ ಹಾಕಿಸಿತ್ತು. ಅಕ್ಕ ಪಕ್ಕ ಕೆರೆಯ ದಂಡೆಯ ಮೇಲೆ ಸುಂದರ ಹೂದೋಟವನ್ನು ನಿರ್ಮಾಣಮಾಡಿತ್ತು. ನವಲಗುಂದದ ಜನ ಬೆಳಿಗ್ಗೆ ಇಲ್ಲಿಗೆ ವಾಯು ವಿಹಾರಕ್ಕೆಂದು ಕೆರೆಗೇ ಬರುತ್ತಿದ್ದರು.

ಇಂದು ಮನೆ ಮನೆಗೆ ನಲ್ಲಿ ನೀರು ತಲುಪುತ್ತಲೇ ಕೆರೆ ನೀರು ಹಾಳಾಗ ತೊಡಗಿತು. ಆರೋಗ್ಯ ಇಲಾಖೆ ಈ ನೀರನ್ನು ಪರಿಶೀಲಿಸಿ 'ಕುಡಿಯಲು ಅಯೋಗ್ಯ ನೀರು' ಎಂದು ಪ್ರಮಾಣೀಕರಿಸಿದೆ. ಆರೋಗ್ಯ ಇಲಾಖೆಯ ಎಚ್ಚರಿಕೆಯನ್ನು ಕಡೆಗಣಿಸಿ ಈ ನೀರನ್ನು ಬಳಸಿ ದವಾಖಾನೆಗೆ ದಾಖಲಾದ ಪ್ರಕರಣಗಳು ಇಂದು ಕೂಡ ಸಾಕಷ್ಟಿವೆ. ಹಬ್ಬ/ ಹರಿದಿನ ಹಾಗು ಜಾತ್ರೆ, ಉತ್ಸವ ಮತ್ತು ಸಂತೆಯ ದಿನಗಳಂದು ಸಾಕಷ್ಟು ಸಂಖ್ಯೆಯಲ್ಲಿ ಅಕ್ಕ-ಪಕ್ಕದ ಹಳ್ಳಿಗಳಿಂದ ನವಲಗುಂದಕ್ಕೆ ಬರುವ ಜನರಿಗೆ ಹೊಟೇಲ್ ಮಾಲೀಕರು ಇದೇ ನೀರನ್ನು ಕುಡಿಯಲು ಪೂರೈಸುತ್ತಿದ್ದಾರೆ! ೭೦ ದಶಕಗಳ ಜೀವದಾಯಿ ಕೆಲವೇ ವರ್ಷಗಳಲ್ಲಿ ಪ್ರಾಣ ಇಂಗು ಗುಂಡಿಯಾಗಿ ಮಾರ್ಪಡುತ್ತಿದೆ.

ನವಲಗುಂದ ಪುರಸಭೆ ಈ ಕೆರೆಯನ್ನು ಉಳಿಸಲು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಿತ್ತು. ಆದರೆ ಉದಾಸೀನ ಧೋರಣೆ ತಾಳಿದೆ. ಈ ನೀಲಮ್ಮನ ಕೆರೆಯನ್ನೇ ಅಭಿವೃದ್ಧಿ ಪಡಿಸಿ ಶುದ್ಧವಾದ ನೀರು ಪೂರೈಕೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದನ್ನು ಮರೆತ ಹಾಗೆ ಮೇಲ್ನೋಟಕ್ಕೆ ಕಾಣುತ್ತದೆ. ಇದೇ ರೀತಿ ಕೆರೆಯ ಅವ್ಯವಸ್ಥೆ ಮುಂದುವರೆದರೆ ಈ ಐತಿಹಾಸಿಕ ಕೆರೆ ಮರಣ ಶಯ್ಯೆಯಲಿ ಒರಗುವುದರಲ್ಲಿ ಸಂಶಯವಿಲ್ಲ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಊರಿನ ಕುರುಹಾಗಿ ಇದನ್ನು ಉಳಿಸಿಕೊಳ್ಳಲು ಪುರಸಭೆ ಒಂದು ಸಮರ್ಪಕ ಕ್ರಿಯಾ ಯೋಜನೆ ಸಕಾಲಿಕವಾಗಿ ತಯಾರಿಸಬೇಕಿದೆ.

ಕವಿತಾ ಹಳ್ಳಿ
ಎಂ.ಎ.ಜೆ.ಎಂ. ಪ್ರಥಮ ವರ್ಷದ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

0 comments:

Post a Comment