ನೀರು ಅಮೂಲ್ಯವಾದುದು ಮಿತವಾಗಿ ಬಳಸೋಣ

Sunday, May 31, 2009

ಭೂಮಿ ಬೇಸಿಗೆಯ ಬಿಸಿಲಿಗೆ ಕಾದಿದೆ. ಮಳೆಯಿಲ್ಲದೇ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಭೂಮಿಗೆ ಜ್ವರ ಬರುವ ಸ್ಠಿತಿಯಲ್ಲಿದೆ! ಆದರೆ ನಾವು ಮಾತ್ರ ನೀರನ್ನು ಬೇಕಾಬಿಟ್ಟಿ ಬಳಸಿ ನೀರಿನ ಅಮೂಲ್ಯವಾದ ಪಾತ್ರವನ್ನೇ ಬರಿದು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದಿನಬೆಳಗಾದರೆ ಸಾಕು ಗ್ರಾಮಗಳಲ್ಲಿ ನಮ್ಮ ಜನರು ಕುಡಿಯಲು ನೀರಿಲ್ಲದ ಕಾರಣಕ್ಕಾಗಿ 5 ರಿಂದ 10 ಕಿ.ಮೀ. ವರೆಗೆ ಹೋಗಿ ಸೈಕಲ್.ಬಂಡಿ.ಕೊನೆಗೆ ಕಾಲುದಾರಿಯಲ್ಲಿ ನೀರನ್ನು ತರುವಂಥಹದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.ಗ್ರಾಮಗಳಲ್ಲಿ ಬಾವಿ ಹಳ್ಳ-ಕೊಳ್ಳ,ಕಾಲುವೆ ಹೊಂಡಗಳು ನೀರಿಲ್ಲದೆಯೇ ಒಣಗುತ್ತಿವೆ.ಇನ್ನೊಂದೆಡೆ ಮಳೆಯಿಲ್ಲದೆ ಗಿಡ ಮರಗಳು ಒಣಗುತ್ತಿವೆ. ಕೃಷಿ ಭೂಮಿಯಲ್ಲಿ ನೀರಿಲ್ಲದೇ ವ್ಯವಸಾಯ ಮಾಡಲು ರೈತರಿಗೆ ಅತೀ ಕಷ್ಟದಾಯಕವಾಗಿದೆ.

ಇಷ್ಟೆಲ್ಲಾ ಆದರೂ ನೀರನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ.ಗಜೇಂದ್ರಗಡ ಬೆಟ್ಟದ ಮೇಲೆ ಅನೇಕ ಸಿಹಿನೀರಿನ ಹೊಂಡಗಳಿವೆ. ಅವುಗಳಲ್ಲಿ ಅಕ್ಕ ತಂಗಿ,ಆಕಳ ಮತ್ತು ಮಂಗನ ಹೊಂಡಗಳೆಂದು ಕರೆಯುತ್ತಾರೆ. ಈ ಹೊಂಡಗಳ ನೀರನ್ನು ಇಲ್ಲಿನ ಲಂಬಾಣಿ ಜನಾಂಗದವರು ಸಾರಾಯಿ ತಯಾರಿಸಲು ಉಪಯೋಗಿಸುತ್ತಾರೆ. ಹೊಂಡದ ದಡದ ಮೇಲೆ ಹೆಂಡವನ್ನು ತಯಾರಿಸುತ್ತಿದ್ದಾರೆ.ಸಾರಾಯಿ ತಯಾರಿಸಿದ ಅಶುದ್ಧ ನೀರು ಮತ್ತು ತಯಾರಿಸಿ ಬಿಟ್ಟುಹೊದ ಬೂದಿ,ಕಟ್ಟಿಗೆ ಪುಡಿ ಕೊಳೆತ ಇನ್ನಿತರ ವಸ್ತುಗಳ ಕಾಲುವೆ ಮುಖಾಂತರ ನೇರವಾಗಿ ಹರಿದು ಹೊಂಡವನ್ನು ಸೇರುವುದರಿಂದ ನೀರು ಪಾಚಿ ಕಟ್ಟಿದಂತೆ ಹಚ್ಚ ಹಸಿರಾಗಿ ಮಾರ್ಪಾಡುತವೆ.

ಇದರಿಂದ ನೀರು ವಾಸನೆ ಬರುತ್ತಿರುತ್ತದೆ.ಆದರೆ ಮೂಕ ಪ್ರಾಣಿಗಳು ದಾಹವನ್ನು ತೀರಿಸಿಕೊಳ್ಳಲು ಸಾರಾಯಿ ತ್ಯಾಜ್ಯದಿಂದ ಅಶುದ್ಧಗೊಂಡ ನೀರನ್ನು ಕುಡಿದು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.ಅದೇ ಮಳೆಗಾಲದಲ್ಲಿ ಹೊಂಡಗಳು ತುಂಬಿ ಜಲಪಾತದಂತೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ರಮಣೀಯ. ಹೊಂಡಗಳ ನೀರು ಮಲಿನವಾಗುವುದು ಹೀಗೇ ಮುಂದುವರೆದರೆ ಈಗ ಪ್ರಾಣಿಗಳಿಗೆ ತಗಲುವ ರೋಗಗಳು ಮುಂದೆ ಮನುಷ್ಯರಿಗೂ ತಗಲುವ ಯಾವ ಸಂದೇಹವಿಲ್ಲ.

ತಿಪ್ಪಣ್ಣ ಅವಧೂತ
ಎಂ.ಎ.ಜೆ.ಎಂ. II ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್.ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ -೨೯

ಸಮ್ಯಕ್ ದರ್ಶನ

Saturday, May 30, 2009

ವಿದ್ಯಾಭಾರತಿ ಪ್ರತಿಷ್ಠಾನದ ವತಿಯಿಂದ ’ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ. ೪೦ ಎಕರೆ ಪ್ರದೇಶ ಹೊಂದಿರುವ ಹಾಗೂ ಒಂದೇ ಸೂರಿನಡಿಯಲ್ಲಿ ಸಂಪೂರ್ಣ ವಸತಿ ಕ್ಯಾಂಪಸ್, ಗ್ರಂಥಾಲಯ, ಸ್ವತಂತ್ರ ಪ್ರಯೋಗಾಲದ ವ್ಯವಸ್ಥೆಯನ್ನು ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ವಸತಿ ಮತ್ತು ಪ್ರೊಫೆಸರ್ ಗಳಿಗೂ ಕೂಡಾ ಕ್ಯಾಂಪಸ್ ನಲ್ಲಿಯೇ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಹಸಿರಿನಿಂದ ತುಂಬಿದ ಕ್ಯಾಂಪಸ್, ಅದಲ್ಲದೇ ಸುಂದರವಾದ ಕೆರೆಯೂ ಇದೆ. ವಿದ್ಯಾರ್ಥಿಗಳು ನಿಸರ್ಗದ ಸೌಂದರ್ಯವನ್ನು ಸವಿಯಬಹುದು.ಹುಬ್ಬಳ್ಳಿಯ ವರೂರಿನ ಹತ್ತಿರ ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ.



೨೦೧೫ ರಲ್ಲಿ ಪ್ರಾರಂಭವಾಗಲಿರುವ ಈ ಕ್ಯಾಂಪಸ್ ನಲ್ಲಿ ಪೊಲಿಟೆಕ್ನಿಕ್, ಪತ್ರಿಕೋದ್ಯಮ, ಇಂಜನಿಯರಿಂಗ್, ಫಾರ್ಮಸಿ ಕೋರ್ಸ್ ಗಳು ಪ್ರಾರಂಭವಾಗಲಿದೆ.೨೦೧೫ ಅಕ್ತೋಬರ್ ದಂದು ಪೊಲಿಟೆಕ್ನಿಕ್ ಕೋರ್ಸ್ ಮೊದಲು ಪ್ರಾರಂಭವಾಗಲಿದ್ದು ನಂತರ ಉಳಿದ ಕೋರ್ಸ್ ಗಳು ಪ್ರಾರಂಭವಾಗಲಿವೆ.ವಿದ್ಯಾಭಾರತಿ ಪ್ರತಿಷ್ತಾನದ ವ್ಯವಸ್ಥಾಪಕ ನಿರ್ದೇಶಕರಾದ ವಿನಯಚಂದ್ರ ಮಹೀದ್ರಕರ್ ಅವರು ವಿದ್ಯಾರ್ಥಿಗಳ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕೆನ್ನುವ ದೃಷ್ಟಿಯಿಂದ ಒಂದೇ ಸೂರಿನಡಿಯಲ್ಲಿ ವಸತಿ ಶಿಕ್ಶಣವನ್ನು ಪ್ರಾರಂಭಿಸಲಾಗುತ್ತಿದೆ.ವಸತಿ ಶಿಕ್ಶಣ ಇರುವದರಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳಿಗೆ ರಾತ್ರಿ ಸಮಯದಲ್ಲೂ ಕೂಡ ಪಾಠ ಹೇಳಬಹುದು ಮತ್ತು ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಏನಾದರೂ ಸಮಸ್ಯೆ ಬಂದರೆ ಕೂಡಲೇ ಪರಿಹರಿಸಕೊಳ್ಳಬಹುದು.

ಕೋಮಲ ಮೋಟಗಿ
ಪಿ.ಜಿ.ಡಿಜೆ.
ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.

ಬೀರವಳ್ಳಿಯ ಕೆಂಡದೋಕುಳಿಯ ವೈಶಿಷ್ಟ್ಯ

Monday, March 30, 2009

ಹೋಳಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಬಣ್ಣವನ್ನು ಎರಚಿಕೊಂಡು ಸಂಭ್ರಮಿಸುವುದು ಎಲ್ಲೆಡೆ ಕಂಡು ಬರುವ ಸಾಮಾನ್ಯ ದೃಶ್ಯ . ಬಣ್ಣದ ಬದಲು ಉರಿಯುವ ಕೆಂಡಗಳನ್ನೇ ಎತ್ತಿ ಎರಚಿದರೆ? ನಂಬಲು ಅಸಾಧ್ಯ ಅಲ್ಲವೇ? ಆದರೆ ಇದು ನಿಜ. ಕಲಘಟಗಿ ತಾಲೂಕು ಬೀರವಳ್ಳಿ ಗ್ರಾಮದ ಕಲ್ಮೇಶ್ವರನ ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳು ಕೆಂಡದೊಕುಳಿ ಆಡಿ ಹರಕೆ ತೀರಿಸುತ್ತಾರೆ.

ಬಣ್ಣಗಳ ಬದಲು ನಿಗಿ ನಿಗಿ ಉರಿಯುತ್ತಿರುವ ಕೆಂಡಗಳನ್ನು ಎರಚಿಕೊಂಡರೆ, ಮುಂದಿನ ವರ್ಷದ ಓಕುಳಿ ಆದುವುದು ದೂರದ ಮಾತು ಬಿಡಿ; ಹಬ್ಬವನ್ನು ಸಹ ಆಚರಿಸಲು ಭಕ್ತಾದಿಗಳು ಸಬಲರಾಗಿರಲಾರರು. ನಮ್ಮ ದೇಶದಲ್ಲಿ ಪವಾಡಗಳಿ ಕೊರತೆ ಇಲ್ಲ. ಬೀರವಳ್ಳಿ ಗ್ರಾಮದಲ್ಲಿ ನಡೆಯುವ ಓಕುಳಿಯಲ್ಲಿ ಕೆಂಡಗಳನ್ನು ಪರಸ್ಪರ ಮೈಮೇಲೆರೆಚಿಕೊಂಡರೂ ಸುಟ್ಟ ಗಾಯಗಳಾಗುವುದಿಲ್ಲ. ಭಕ್ತಿ ಭಾವಗಳ ಪರವಶತೆಯಲ್ಲಿ ಭಕ್ತರು ಕೆಂಡಗಳೊಂದಿಗೆ ಓಕುಳಿ ಆಡುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಶ್ರೀ ಕಲ್ಮೇಶ್ವರನಿಗೆ "ಕೆಂಡದ ನೈವೇದ್ಯ" ಮಾಡುವ ಮೂಲಕ ಜಾತ್ರೆ ಆಚರಿಸುವುದು ಈ ಭಾಗದ ವಿಶೇಷ.

ಕ್ರಿಸ್ತ ಶಕೆ ೧೨ ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಅರಸು ಎರಡನೇ ವಿಕ್ರಮಾದಿತ್ಯ ಈ ದೇವಾಲಯವನ್ನು ಕಟ್ಟಿಸಿದ. ಮಲೆನಾಡಿನ ಅಂಚಿನಲ್ಲಿ ಇರುವ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಬೀರವಳ್ಳಿ ಗ್ರಾಮದ ಶ್ರೀ. ಕಲ್ಮೆಶ್ವರ ಜಾತ್ರೆ ಹೋಳಿ ಹುಣ್ಣಿಮೆ ನಂತರ ಬರುವ ಷಷ್ಠಿಯಂದು ನಡೆಯುತ್ತದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಜಾತ್ರೆ ನಡೆಯುವ ಮೊದಲು ಕಲ್ಮೇಶ್ವರ ದೇವಸ್ಥಾನದ ಎದುರು ಇರುವ ಬಯಲಿನಲ್ಲಿ ಸಮೀಪದ ಕಾಡಿನಿಂದ ಕಟ್ಟಿಗೆಗಳನ್ನು ಕಡಿದು ತಂದು ರಾಶಿ ಹಾಕಿ ಅಗ್ನಿ ಪ್ರಜ್ವಲಿಸಲಾಗುತ್ತದೆ. ಅಗ್ನಿ ದೇವ ಕಟ್ಟಿಗೆಯ ರಾಶಿಯನ್ನು ಕೆಲ ತಾಸುಗಳಲ್ಲಿ ಕೆಂಡದ ರಾಶಿಯನ್ನಾಗಿ ಪರಿವರ್ತಿಸುತ್ತಾನೆ.

ಕೆಂಡದ ರಾಶಿಯಿಂದ ಕೆಂಡಗಳನ್ನು ನೈವೇದ್ಯ ಮಾಡಿದ ನಂತರ ಊರ ಗೌಡರನ್ನು ರಾಶಿಯ ಬಳಿ ಕುಳ್ಳಿರಿಸಿ ಅವರ ಮೇಲೆ ತೆಳ್ಳನೆಯ ಬಟ್ಟೆಯನ್ನು ಹಿಡಿಯಲಾಗುತ್ತದೆ. ಅದರಲ್ಲಿ ಮರದ ಹುಟ್ಟಿನಿಂದ ಕೆಂಡಗಳನ್ನು ಹಾಕಿ ಸುತ್ತ ನಿಂತವರ ಮೇಲೆ ತೂರಲಾಗುತ್ತದೆ. ಇಲ್ಲಿಂದ ಮುಂದೆ ನಡೆಯುವುದು ಕೆಂಡದೊಕುಳಿಯ ಪರಾಕು. ಹರಕೆ ಹೊತ್ತ ಯುವಕರು ಹಾಗೂ ಗ್ರಾಮಸ್ಥರು ಕೆಂಡಗಳನ್ನು ಬರಿಗೈಯಲ್ಲಿ ಹಿಡಿದು ತೂರಲು ಆರಂಭಿಸುತ್ತಾರೆ. ಕೆಂಡವನ್ನು ಕೈಯಲ್ಲಿ ಹಿಡಿದು ತೂರುವವರಿಗಾಗಲಿ ಅಥವಾ ಮೈ ಮೇಲೆ ಕೆಂಡಗಳು ಬಿದ್ದವರಿಗಾಗಲಿ ಯಾವುದೇ ಘತವಾಗದಿರುವುದು ವಿಸ್ಮಯಕಾರಿ. ಕೆಂಡಗಳನ್ನು ಕೈಯಲ್ಲಿ ಹಿಡಿದಾಗ ಮಲ್ಲಿಗೆ ಹೂವಂತೆ ಅರಳುತ್ತವೆ ಎಂಬುದು ಗ್ರಾಮಸ್ಥರ ಶೃದ್ಧೆ.
ನಮಗೆ ಗೊತ್ತಿರುವಂತೆ ಹಿಂದೂ ಸಂಸ್ಕೃತಿ ವಿಸ್ಮಯಗಳ ಆಗರ. ಪ್ರತಿ ಹಬ್ಬಕ್ಕೊಂದು ವಿಶಿಷ್ಟ ರೀತಿಯ ಆಚರಣೆಗಳನ್ನು ಪಾಲಿಸುವುದರೊಂದಿಗೆ ಭಕ್ತರನ್ನು ಭಾವುಕರನ್ನಾಗಿಸುತ್ತದೆ. ಉದಾಹರಣೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಲಿತವಿರುವ ಸಿಡಿ ಏರುವ ಹರಕೆ. ಅದೇ ರೀತಿ ಕೆಂಡದೊಕುಳಿಯು ಸಹ ಒಂದು. ನಂಬಿಕೆಯೊಂದು ಇದ್ದರೆ ಸಾಕು ಕೆಂಡವು ಮಲ್ಲಿಗೆ ಎನ್ನುವುದಕ್ಕೆ ಬೀರವಳ್ಳಿಯ ಕೆಂಡದೊಕುಳಿ ಸಾಕ್ಷಿ. ಆಸ್ತಿಕರಿಗೆ ಇದು ವಿಶೇಷ ಓಕುಳಿ.
ಸು.ಶ್ರೀ.ಕೋಮಲ ಮೋಟಗಿ
ಪಿ.ಜಿ.ಡಿಜೆ.ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.

ಬದುಕಿಗೆ ಗೌರವದ ಭಾಷ್ಯ ಬರೆದ ಸೋಮು

Thursday, March 26, 2009

ಗೋಧೂಳಿಯ ಹೊತ್ತಿಗೆ ಎಲ್ಲ ಶಾಲೆ, ಕಾಲೇಜುಗಳು, ಕಚೇರಿಗಳು ತಮ್ಮ ದೈನಂದಿನ ಕೆಲಸವನ್ನು ಮುಗಿಸುತ್ತವೆ. ಆದರೆ ಆ ಹೊತ್ತಿಗೆ ತಮ್ಮ ಕೆಲಸ ಶುರು ಎಂದು ಭರದಿಂದ ನಮ್ಮನ್ನು ಕೈಬೀಸಿ ಕರೆಯುತ್ತಾರೆ ನಾನಾ ತಿನಿಸುಗಳ ತಳ್ಳು ಗಾಡಿಗಳ ಮಾಲೀಕರು. ಸೀಮೆ ಎಣ್ಣೆ ಅಥವಾ ಗ್ಯಾಸ್ ನಿಂದ ಉರಿಯುವ ಒಲೆಗಳಿಗೆ ಸಂಜೆಯ ಕೆಲವು ಗಂಟೆಗಳು ಬಿಡುವಿಲ್ಲದ ಕೆಲಸ. ಅಲ್ಲಿ ಹುರಿಯುವ ಶೇಂಗಾ ಕಾಳಿಗೆ, ಬೇಯುವ ಆಮ್ಲೆಟ್ ಗೆ, ಪಾನಿಪುರಿಗೆ, ಗೋಭಿ ಮಂಚೂರಿಗೆ.. ಆಹಾ ಆ ರುಚಿಗೆ ಮನಸೋಲದವರಾರು?


ಸೌತೆಕಾಯಿಯನ್ನು ಕಲಾತ್ಮಕವಾಗಿ ಕತ್ತರಿಸಿ ಖಾದ್ಯಗಳ ಮೇಲಿಟ್ಟು, ಸ್ವಲ್ಪ ನಿಂಬೆಹಣ್ಣಿನ ರಸ ಮತ್ತೆ ಖಾರದ ಪುಡಿ, ಉಪ್ಪನ್ನು ಸವರಿಕೊಟ್ಟರೂ ವ್ಯಾಪಾರಿಯ ಜೇಬು ತುಂಬುತ್ತದೆ ಅಲ್ಲವೇ? ಪಕ್ಕದಲ್ಲಿ ಪಂಚತಾರಾ ಹೊಟೇಲುಗಳಿದ್ದರೂ ಜನ ಈ ರುಚಿಗೆ ಮನಸೋತು, ತಳ್ಳು ಗಾಡಿಗಳು ತಮ್ಮ ಕೆಲಸ ಪ್ರಾರಂಭಿಸುತ್ತಿದ್ದಂತೆ ಮುಗಿ ಬೀಳಲು ಹಾತೊರೆಯುತ್ತಾರೆ. ಇದೆಂತಹ ಸಮುದಾಯ ಮೋಡಿಯ ಸಂಗತಿಯೋ ನೋಡಿ ?

ಕುರುಕಲು ತಿಂಡಿಯ ತಳ್ಳುಗಾಡಿಯವರದು ನಿತ್ಯ ಸಂಜೆ ಕೆಲವೇ ಗಂಟೆಗಳ ವ್ಯಾಪಾರ. ಅದು ಶಹರ ದೊಡ್ಡದಿರಲಿ ಅಥವಾ ಸಣ್ಣದಿರಲಿ ಜನಕೂಡ ಸಂಜೆಯ ಹೊತ್ತಿನಲ್ಲಿ ಬಿಡುವು ಮಾಡಿಕೊಂಡು ಈ ಸಂಚಾರಿ ಹೊಟೇಲುಗಳಿಗೆ ಬಂದು ತಮಗಿಷ್ಟವಾದ ಖಾದ್ಯಗಳನ್ನು ಕುಟುಂಬ ಸಮೇತ ಸೇವಿಸುತ್ತಾರೆ. ಕಡಿಮೆ ಬೆಲೆಗೆ, ಬಾಯಿ ಚಪಲಕ್ಕೆ, ರುಚಿ ರಸಿಕತೆಯಿಂದ ಹೆಚ್ಚು ತಿನ್ನಬಹುದು ಎಂಬ ಸಣ್ಣ ದುರಾಸೆಯಿಂದಲೂ ಇರಬಹುದು!

ಮೊದಲು ಇದು ಬಡವರಿಂದ, ಬಡವರಿಗಾಗಿ ನಡೆಸಲ್ಪಡುವ ‘ವಡಾಪಾವ್’ ವ್ಯಾಪಾರ ಎಂದು ಕರೆಯಲ್ಪಡುತ್ತಿತ್ತು. ಈಗ ಎಲ್ಲ ವರ್ಗದ ಜನರಿಗೂ ಇದು ಆಕರ್ಷಣೀಯವಾಗಿ ಪರಿಣಮಿಸಿದೆ. ಹುಬ್ಬಳ್ಳಿಯಲ್ಲಿ ತಳ್ಳುಗಾಡಿಯನ್ನೇ ಬದುಕಿಗೆ ಆಧಾರವನ್ನಾಗಿರಿಸಿಕೊಂಡಿರುವ ಸೋಮು ಕುಮುಟಾದಿಂದ ಬಂದು ಇಲ್ಲಿ ನೆಲೆಸಿದವರು. ಮೊದಲು ಹುಬ್ಬಳ್ಳಿಯ ಎ.ಪಿ.ಎಮ್.ಸಿಯಲ್ಲಿ ಅವರಿಗೆ ಒಂದು ತಳ್ಳುಗಾಡಿ ಇತ್ತು. ಅದರಲ್ಲಿ ಮೋಟೆಯನ್ನು ಹೊತ್ತು ಅಂಗಡಿಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ಅದರೆ ಒಂದು ಸಣ್ಣ ಅಪಘಾತವಾಗಿ ಆ ಗಾಡಿ ಮುರಿದು ಹೋಯಿತು. ಅದನ್ನು ರಿಪೇರಿ ಮಾಡಿದರೂ ಅದು ಮೋಟೆಗಳನ್ನು ಎಳೆಯುವಂತಿರಲಿಲ್ಲ. ಅದರ ಚಕ್ರ ಸಂಪೂರ್ಣ ಮುರಿದಿತ್ತು. ಅದನ್ನು ಹಾಕಿಸುವ ಹಣವು ಅವರಲ್ಲಿ ಇರಲಿಲ್ಲ.

ಹಾಗಾಗಿ ಗಾಡಿಯನ್ನು ನಿಂತಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದು ಅನಿವಾರ್ಯವಾಯಿತು. ಆಗ ಅವರಿಗೆ ಹೊಳೆದದ್ದು ಈ ವ್ಯಾಪಾರ. ಹಾಗಾದರೆ ಹೇಗಿದೆ ಇವರ ವ್ಯಾಪಾರ? ಉತ್ತರಿಸುವಾಗ ಸೋಮು ಮುಖದಲ್ಲಿ ಕೊಂಚ ನಗು ಮೂಡುತ್ತದೆ. ವ್ಯಾಪಾರದ ಗುಟ್ಟು ಬಿಟ್ಟುಕೊಡದ ಜಾಣ್ಮೆ ಅವರಲ್ಲಿದೆ. "ಎ.ಪಿ.ಎಂ.ಸಿ ಯಲ್ಲಿ ಗಾಡಿ ತಳ್ಳುತ್ತಿದ್ದಾಗ ದಿನಕ್ಕೆ ೧೦೦ ರೂಪಾಯಿ ಸಿಗುತ್ತಿರಲಿಲ್ಲ. ಆದರೆ ಈಗ ಮಗನಿಗೆ ಇಂಜಿನಿಯರಿಂಗ್ ಓದಿಸುತ್ತಿದ್ದೇನೆ. ಮಗಳು ಎಮ್.ಎಸ್.ಡಬ್ಲು ಓದುತ್ತಿದಾಳೆ. ಒಂದು ಚಿಕ್ಕ ಸೂರು ಸಹ ಕಟ್ಟಿಕೊಂಡಿದ್ದೇನೆ" ಎಂದು ಧನ್ಯತೆ ಮೆರೆಯುತ್ತಾರೆ.

ಈ ತಳ್ಳು ಗಾಡಿಗಳು ಸೋಮು ಅವರಂತೆ ಪ್ರಾಮಾಣಿಕವಾಗಿ ದುಡಿದು, ಸ್ವಾವಲಂಬಿಯಾಗಿ ಬದುಕಬೇಕು ಎಂಬುವವರಿಗೆ ಪ್ರೇರಣಾದಾಯಿ. ಕಡಿಮೆ ಬಂಡವಾಳ, ಹೆಚ್ಚು ಲಾಭ ಬಯಸುವವರಿಗೆ ಅನುಕೂಲಕರವಾಗಿದೆ. ಈ ಗಾಡಿ ಬಳಸಿ ವ್ಯಾಪಾರ, ವ್ಯವಹಾರ ಮಾಡುವುದಕ್ಕೆ ಪರವಾನಗಿ ಶುಲ್ಕವೆಂದು ೨೫/- ರಿಂದ ೧೦೦/- ವರೆಗೆ ಕರ ವಿಧಿಸಲಾಗುತ್ತದೆ. ಬ್ಯಾಂಕುಗಳು ಕೂಡಾ ಈ ಗಾಡಿಯನ್ನು ಖರೀದಿಸಲು ಸಾಲವನ್ನು ನೀಡುತ್ತವೆ.

ಕಾಯಿದೆ ಪ್ರಕಾರ ಒಂದು ಕಡೆ ನಿಲ್ಲದೇ ನಿರಂತರ ಜಂಗಮರಾಗಿ ವ್ಯಾಪಾರ ಮಾಡಬೇಕೆಂಬ ನಿಯಮವಿದೆ. ಜೊತೆಗೆ ಉಳಿದ ಅಂಗಡಿ, ಹೊಟೇಲುಗಳವರ ತಕರಾರು ಬೇರೆ. ಅದಕ್ಕಾಗಿ ಉದ್ಯಾನ, ಕ್ರೀಡಾಂಗಣ, ಬಯಲು ನಾಟ್ಯ ಮಂದಿರಗಳು, ರಂಗ ಮಂದಿರಗಳು, ಸಿನೇಮಾ ಗ್ರಹಗಳು, ಕಾಲೇಜು ಹೊರವಲಯ ಸೇರಿದಂತೆ ಮತ್ತಿತರ ಖಾಲಿ ಇರುವ ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ಸೋಮು. ಇದಲ್ಲದೆ ತರಕಾರಿಗಳನ್ನು, ಹಾಲಿನ ಪ್ಯಾಕೇಟುಗಳನ್ನು, ಹಣ್ಣುಗಳನ್ನು ಸಹ ಕೆಲವು ವ್ಯಾಪಾರಿಗಳು ಈ ತಳ್ಳುಗಾಡಿಗಳಲ್ಲಿ ಹಾಕಿಕೊಂಡು ಮನೆಮನೆಗೆ ಮಾರುತ್ತಾರೆ. ಮಹಿಳೆಯರೂ ಇದಕ್ಕೆ ಹೊರತಲ್ಲ.

ಇತ್ತೀಚೆಗೆ ಈ ತಳ್ಳು ಗಾಡಿಯನ್ನು ತಯಾರಿಸುವುದರಲ್ಲೂ ಅಂಗಡಿಯವರು ಲಾಭಗಳಿಸುತ್ತಿದ್ದಾರೆ. ಮರದ ಅಥವಾ ಪ್ಲಾಸ್ಟಿಕ್ ಹಲಗೆ, ಅದಕ್ಕೊಂದು ಸೂರು ನೆರಳಿಗೆ ಆಧಾರವಾಗಿ, ಎರಡು ಚಕ್ರಗಳು ನಾಲ್ಕು ಖಂಬ ಇಷ್ಟರಲ್ಲಿಯೇ ಮೊದಲು ಗಾಡಿ ಮುಗಿಯುತ್ತಿತ್ತು. ಈಗ ಅದರಲ್ಲೂ ವಿವಿಧ ಅಲಂಕಾರಿಕ ರೂಪಗಳು ನಿರ್ಮಾಣಗೊಳ್ಳುತ್ತಿವೆ.

ಹಾಗಾಗಿ ಉದ್ಯೋಗವಿಲ್ಲ ಎಂದು ಕೊರಗುವ ಯುವಕರಿಗೆ ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಸೋಮು ಮಾದರಿಯಾಗಿದ್ದಾರೆ. ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ, ಸ್ವಾಭಿಮಾನದ ಬದುಕು ತಮಗೂ ತಮ್ಮ ಕುಟುಂಬಕ್ಕೂ ಕಲ್ಪಿಸಿ ಏಳಿಗೆ ಸಾಧಿಸಿರುವ ಸೋಮು ನಮಗೆ ಅನುಕರಣೀಯರಾಗಿ ನಿಲ್ಲುತ್ತಾರೆ.

ಹಾಗಿದ್ದರೆ ತಡಯಾಕೆ? ಒಂದು ಸಾರಿ ಸೋಮು ಅವರ ಹೊಟೇಲಿಗೆ ಭೇಟಿ ನೀಡಿ. ಅಲ್ಲಿರುವ ಖಾದ್ಯಗಳನ್ನು ಸವಿಯಿರಿ. ತಾವು ಕಲಿಯದಿದ್ದರೂ ತಮ್ಮ ಮಕ್ಕಳು ಕಲಿಯಲೆಂದು ಅವಿರತ ಶ್ರಮ ಪಡುತ್ತಿರುವ ಸೋಮು ಅವರ ಸ್ವಾಭಿಮನಿ ಬದುಕಿಗೆ ನಮ್ಮ ಕೈಲಾದ ಸಹಾಯ ಅದಾಗಬಲ್ಲದು.
ನಮ್ಮ ಸಂಸಾರದಲ್ಲಿ ಸೋಮು ಅವರಂತಹ ಇಂತಹ ಚಿಕ್ಕ ಚಿಕ್ಕ ದೀಪಗಳೇ ಕುಲ ಸಂಸಾರದ ನಿಜ ಕುಲದೀಪಗಳು ಎಂಬುದರಲ್ಲಿ ಸಂಶಯವಿಲ್ಲ.

ಗಣಪತಿ ಹೆಗಡೆ
ಎಂ.ಎ.ಜೆ.ಎಂ.
೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.

ಬೇಸಿಗೆ ಎಂದು ಮರುಗದಿರಿ..ತಂಪೆರೆಯಲು ಮುರುಗಲಿದೆ.

Friday, March 13, 2009

ಭೂಮಿ ಜೀವಿಗಳಿಗೆ ಅಸಹ್ಯವಾಗುತ್ತಿದೆ. ತಾಪಮಾನದ ಏರಿಕೆಯಿಂದ ಬದುಕು ಅಸಹನೀಯವಾಗುತ್ತಿದೆ. ಭೂಮಿಗೆ ಜ್ವರ ಬಂದಿದೆ, ನೆತ್ತಿ ಕೆಂಪಾಗಿದೆ ಹೀಗೆ ವಿಶೇಷ ವಿಶ್ಲೇಷಣೆಗಳನ್ನು ತಜ್ಞರು ಮಾಧ್ಯಮಗಳಲ್ಲಿ ತೂರಿ ಬಿಡುತ್ತಿದ್ದಾರೆ. ಈಗ ಈ ವಿಷಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ವಿಶ್ವವ್ಯಾಪಿ ವಿದ್ಯಮಾನವಾಗಿ ಪರಿಣಮಿಸಿದೆ.



ಜಾಗತಿಕ ತಾಪಮಾನದ ಬಿಸಿ ಮಾತ್ರ ಪ್ರತಿಯೊಬ್ಬರನ್ನು ತಟ್ಟುತ್ತಿದೆ. ವಯುಕ್ತಿಕ ಮಟ್ಟದಲ್ಲಿ ಈ ಸಮಸ್ಯೆಯನ್ನು ಹುಟ್ಟು ಹಾಕಿ, ಜಾಗತಿಕ ಹಂತ ತಲುಪಿರುವ ನಾವು ಈಗ ಬೇರು ಮಟ್ಟದಿಂದ ಈ ಸಮಸ್ಯೆ ಬಗೆಹರಿಸಿಕೊಳ್ಳುವದು ಹೇಗೆ?
ನಮ್ಮದೇ ಆದ ಮನೆಮದ್ದು ಅಥವಾ ಪಾರಂಪರಿಕ ಜ್ಞಾನಕ್ಕೆ ಮೊರೆ ಹೋಗುವ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ತಮಗೆ ಆಶ್ಚರ್ಯವಾಯಿತೇ? ಬೇಸಿಗೆಯ ಬೇಗೆ ತಣಿಸಲು ಮುರುಗಲು ಪೇಯ ಈಗ ವಿಶೇಷ ಸ್ಥಾನ ಪಡೆಯುತ್ತಿದೆ.

ಆದಿ ಕಾಲದಿಂದಲೂ ಮುರುಗಲು ಹಣ್ಣಿನ ಬಗ್ಗೆ ಸಾಕಷ್ಟು ಉಲ್ಲೇಖವಿತ್ತಾದರೂ ಪ್ರಸಿದ್ಧ ತಂಪು ಪಾನೀಯಗಳಿಗೆ ಹಾಗು ಅನ್ಯ ದೇಶಿಯ ಪಾನೀಯಗಳಿಗೆ ಹೋಲಿಸಿದರೆ ಮುರುಗಲು ಪೇಯ ಜಗಜಾಹೀರಾಗಲು ಇನ್ನೂ ಶತಮಾನಗಳೇ ಉರಳಬೇಕೆನೋ?
ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಆಸರೆಗೆಂದು ‘ಕೋಕಂ’ ಬಳಸುವುದು ಖಾಯಂ. ಈ ಮುರುಗಲು ಹಣ್ಣಿನ ಪೇಯ ಪ್ರತಿ ಮನೆಯಲ್ಲಿ ಬೇಸಿಗೆಯ ಆದರಾಥಿತ್ಯದ ಸಂಕೇತ. ಈಗೀಗ ಕರ್ನಾಟಕದ ಹಲವೆಡೆ ತೀವ್ರಗತಿಯಲ್ಲಿ ಜನಪ್ರಿಯಗೊಳ್ಳುತ್ತಿರುವ ತಂಪು ಪಾನೀಯ ಕೋಕಂ ಎನ್ನಬಹುದು.
ಈ ಮುರುಗಲು ಪೇಯವನ್ನು ತಯಾರಿಸುವುದು ಹೇಗೆ? ಕೇವಲ ಹಣ್ಣುಗಳನ್ನು ಗಿಡದಿಂದ ಕಿತ್ತು ತಂದ ಮಾತ್ರಕ್ಕೆ ಕೋಕಂ ತಯಾರಾಗುವದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಹಣ್ಣುಗಳು ಲಭ್ಯ. ಸಾಧಾರಣವಾಗಿ ಎಪ್ರೀಲ್- ಮೇ ತಿಂಗಳಿನಲ್ಲಿ ಮುರುಗಲ ಗಿಡಗಳು ಫಲ ಕೊಡಲು ಪ್ರಾರಂಭಿಸುತ್ತವೆ.

ಗಿಡದಿಂದ ಕಿತ್ತು ತಂದ ನಂತರ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸುವ ಕೆಲಸ ಆಗಬೇಕು. ತಂಪು ಪಾನೀಯ ತಯಾರಿಸುವಾಗ ಈ ಹಣ್ಣಿನ ಬೀಜಗಳು ಅಪ್ರಯೋಜನಕಾರಿ. ಇಲ್ಲಿ ಹಣ್ಣಿನ ತಿರುಳು ಹಾಗು ಸಿಪ್ಪೆಗಳೇ ನಮಗೆ ಕೋಕಂ ಆಗುವ ಸರಕುಗಳು. ಸಿಪ್ಪೆಯನ್ನು ಅದರ ಗಾತ್ರದ ಅನುಸಾರ ಅಂದರೆ ೧ ಕಿಲೋ ಸಿಪ್ಪೆಗೆ ೪ ಲೀಟರ್ ನೀರನ್ನು ಹಾಕಿ ಹದ ಮಾಡಿಟ್ಟು, ೧೦ ರಿಂದ ೧೫ ದಿನಗಳವರೆಗೆ ಸೂರ್ಯನ ಬಿಸಿಲಿಗೆ ಒಡ್ಡಬೇಕು. ಪಾತ್ರೆಯ ಬಾಯಿಗೆ ಬಟ್ಟೆ ಕಟ್ಟಿ ಒಣಗಿಸಲೂ ಬಹುದು. ನಂತರ ಅದನ್ನು ಬಾಣಲೆ ಅಥವಾ ಪಾತ್ರೆಯಲ್ಲಿ ಹಾಕಿ ಗಾಳಿಯಾಡದಂತೆ ಇಡಬೇಕು. ಅವಶ್ಯಕತೆ ಬಿದ್ದಾಗ ಒಂದು ಲೋಟ ನೀರಿಗೆ ೨ ಚಮಚ ಕೋಕಂ ರಸ ಸೇರಿಸಿ ತುಸು ಶೈತ್ಯಾಗಾರದಲ್ಲಿಟ್ಟು ನೀಡಿದರೆ ದಾಹ ಇಂಗಿಸಿ, ಆರೋಗ್ಯಸಹ ವೃದ್ಧಿಸುತ್ತದೆ.

ನೀರನ್ನು ಹಾಕದೇ ಮುರುಗಲ ಹಣ್ಣಿನ ಸಿಪ್ಪೆಗಳನ್ನು ಸೂರ್ಯನ ಬಿಸಿಲಿಗೆ ಒಣಗಿಸಿಟ್ಟರೆ ೨-೩ ವರ್ಷಗಳ ಕಾಲ ಅದು ಹಾಳಾಗದೇ ಉಳಿಯುತ್ತದೆ.

ಕೋಕಂ ಕೇವಲ ಪಾನೀಯವಾಗಿ ಮಾತ್ರವಲ್ಲದೇ ಮಲೆನಾಡಿನ ನಮ್ಮ ಹವ್ಯಕರ ಮನೆಗಳಲ್ಲಿ ಊಟದಲ್ಲಿ ಅನ್ನದೊಂದಿಗೆ ತಂಬುಳಿಯಾಗಿಯೂ ಬಳಕೆಯಲ್ಲಿದೆ. ಕೆಲವು ಉಷ್ಣ ರೋಗಗಳಿಗೂ, ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳಿಗೂ ಇದು ಅಡ್ಡಪರಿಣಾಮಗಳಿಲ್ಲದೇ ಶಮನ ಮಾಡಬಲ್ಲ ಅಯುರ್ವೇದ ಮದ್ದಾಗಿದೆ. ಈಚೆಗೆ ವಿದೇಶಗಳಿಗೂ ಈ ಮುರುಗಲು ರಫ್ತಾಗುವ ಸರಕು. ರೈತರು ತಮ್ಮ ಉಪ ಆದಾಯವನ್ನಾಗಿ ಬೇಸಿಗೆಯ ಈ ದಿನಗಳಲ್ಲಿ ಮುರುಗಲನ್ನು ಬಳಸಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ! ಹಾಗಾಗಿ ದೇಹಕ್ಕೆ ಮಾತ್ರವಲ್ಲ ಮನಕ್ಕೂ ಮುದ ನೀಡುವ ಬೆಳೆ ಮುರುಗಲು.

ಗಣಪತಿ ಹೆಗಡೆ
ಎಂ.ಎ.ಜೆ.ಎಂ. ೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.

ಕೊಳ್ಳುವವರಿಗೆ ಬೆತ್ತ ಕಲೆ; ಕುಶಲಕರ್ಮಿಗೆ ಬಾಸುಂಡೆ

Saturday, March 7, 2009

ನಿಮ್ಮ ಮನೆಗಳಲ್ಲಿ ಬೆತ್ತದ ಕುರ್ಚಿಗಳಿವೆಯೇ? ದಿವಾನಗಳಿವೆಯೇ? ಕನಿಷ್ಠ, ಝೂಲಾ ಇರಬಹುದಲ್ಲ? ಅಥವಾ ಅದಕ್ಕೆ ಸಂಬಂಧಿಸಿದ ಯಾವುದಾದರೂ ಅಲಂಕಾರಿಕ ಉಪಕರಣಗಳಿವೆಯೇ? ಹಳೆಯ ಮನೆಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ಬೆತ್ತ ಈಗ ಹೊಸ ಮೆನಗಳಲ್ಲಿ ಅಲಂಕಾರಿಕ ವಸ್ತುವಾಗಿ ಪರಿಣಮಿಸಿದೆ. ಬೆತ್ತ ರೂಪದಿಂದ ಈ ಮನಸೆಳೆಯುವ ಅಲಂಕಾರಿಕ ರೂಪಕ್ಕೆ ತಂದವರ ಪರಿಶ್ರಮ ಎಷ್ಟಿರಬೇಕು? ಅದು ಅಮೂಲ್ಯವಾದುದು.


ಬೆತ್ತವನ್ನು ನೇಯುವ ಕುಶಲಕರ್ಮಿಗಳು ಮೂಲತ: ಕೇರಳದ ಅಲವಾಡಿ ಊರಿನವರು. ಸದ್ಯ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಕಳೆದ ಹಲವಾರು ದಶಕಗಳಿಂದ ಬಿಡಾರ ಹೂಡಿದ್ದಾರೆ. ಬೆತ್ತದಲ್ಲಿ ಕಲೆ ಅರಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಅನ್ನಕ್ಕೆ ಈ ಕಲೆ ಆಧಾರವಾದರೂ ಅಪರೂಪದ ಕಲೆಯನ್ನು ಅಪ್ರಜ್ಞಾಪೂರ್ವಕವಾಗಿ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ.


ಅವರ ಮಾತುಗಳಲ್ಲೇ ಆ ಅನುಭವ ಕೇಳಬೇಕು. "ನಮ್ಮ ಮನ್ಯಾಗ ಭಾಳ ಹಿಂದಿಂದ..ಅಂದ್ರ ಅಜ್ಜಾ-ಅಮ್ಮಗಳ ಕಾಲದಿಂದ ಈ ಬೆತ್ತ ನೇಯ್ಯುವ ಕೆಲಸ ಮಾಡಕೋತ ಬಂದಾರ. ನಮಗೂ ಸಾಲಿ ಬದ್ಲಿ ಈ ಕೆಲಸಾನ ಹೆಚ್ಚ ಒತ್ತಕೊಟ್ಟು ಕಲಿಸ್ಯಾರ. ನಮಗ ಈ ಕೆಲಸ ಬಿಟ್ರ..ಉಳದ ಯಾವ ಕೆಲಸ ಅಷ್ಟಕಷ್ಟ. ಆದ್ರ ನಮಗ ಬೇಕಾಗಿರೋ ಬೆತ್ತ ಈಗ ಸಿಗಾಕತಿಲ್ಲ. ಇಂದು ಇಲ್ಲೆ ನಾಳೆ ಮತ್ತೊಂದ ಕಡೆ. ಹೀಂಗ ಈ ಕಲೆಯನ್ನ ಕೈಗೆತ್ತಿಕೊಂಡು ಜೀವನ ಸಾಗಿಸ್ತಿದ್ದೇವೆ" ಅವರ ಮನದಾಳದ ಮಾತುಗಳಿವು.


ಅವರದು ಅವಿಭಕ್ತ ಕುಟುಂಬ. ದಿವಾನ, ಸೋಫಾ, ಟಿಪಾಯಿ, ಮಕ್ಕಳ ಖುರ್ಚಿಗಳು, ಜೋಕಾಲಿ ಹೀಗೆ ಬೆತ್ತದಿಂದ ಎಲ್ಲ ರೀತಿಯ ಉಪಯುಕ್ತ ಅಲಂಕಾರಿಕ ವಸ್ತುಗಳನ್ನು ಅವರು ತಯಾರಿಸುತ್ತಾರೆ. ಅವರು ಬಹಳ ಕಷ್ಟಪಟ್ಟು ತಯಾರಿಸಿದ ಉಪಕರಣಗಳನ್ನು ಮಧ್ಯವರ್ತಿಗಳು ಬಹಳ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಮಾರುಕಟ್ಟೆಯ ಏರಿಳಿತಗಳ ಬಗ್ಗೆ, ವ್ಯವಹಾರದ ಅಂದಾಜು ಇವರಿಗೆ ಸರಿಯಾಗಿ ತಿಳಿದಿಲ್ಲ. ಹಾಗೆಯೇ ಮೊದಲು ಅರಣ್ಯ ಇಲಾಖೆ ಇವರಿಗೆ ಬೆತ್ತದ ಕಚ್ಚಾಸಾಮಗ್ರಿಗಳನ್ನು ಒದಗಿಸುತ್ತಿತ್ತು. ಆದರೆ ಇಂದು ಇಲಾಖೆ ಬೆತ್ತದ ಪೂರೈಕೆಯನ್ನು ಮಿತಿಗೊಳಿಸಿದೆ. ಸಾಮಾನ್ಯವಾಗಿ ಮನೆಮಂದಿ ಎಲ್ಲರೂ ಸೇರಿ ಈ ಕರಕುಶಲ ಕೆಲಸ ಮಾಡುತ್ತಾರೆ.ಆದರೆ ದೊಡ್ಡ ಕೈಗಾರಿಕೆಗಳ ಪೈಪೋಟಿ ಬೇರೆ ಇವರನ್ನು ಸದಾ ಕಾಡುತ್ತಿದೆ.

ಬೆತ್ತ ಬಲು ಉಪಯುಕ್ತ ವಸ್ತು. ಅದನ್ನು ಯಾವ ರೀತಿಯಲ್ಲಾದರು ಉಪಯೋಗಿಸಬಹುದು. ಅದು ಹಾಳಾಗುವುದು ತೀರ ಕಡಿಮೆ. ಒಂದು ವೇಳೆ ಹಾಳಾದರೆ ಅದರ ರಿಪೇರಿ ಕಾರ್ಯ ಬಲು ಸುಲಭ. ಬೆತ್ತದಿಂದ ಮನೆಯ ಮೆರುಗು ಸಹ ಹೆಚ್ಚುತ್ತದೆ. ಮೇಲಾಗಿ ಇದು ಪರಿಸರ ಸ್ನೇಹಿ.
ಗಣಪತಿ ಹೆಗಡೆ
ಎಂ.ಎ.ಜೆ.ಎಂ.
೪ ಸೆಮ್.
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

ಹೊಸಯಲ್ಲಾಪುರದ ಕಹಿ ಕೆರೆಯ ಮಧ್ಯೆ ಸಿಹಿ ಬಾವಿ

ಹೆಸರಿಗೆ ಅದು ಹೊಸಯಲ್ಲಾಪುರ. ಅಲ್ಲಿ ಇರುವುದೆಲ್ಲ ಹಳೆಯದೇ! ಅಲ್ಲಿರುವ ಬಾವಿಗಳು ಕನಿಷ್ಟ ಒಂದು ಶತಮಾನದ ಮಡಿವಾಳರ ಬದುಕನ್ನು ಸಾರುತ್ತವೆ. ಪಕ್ಕದಲ್ಲಿಯೇ ಲೋಕದ ಸಂತೆ ಮುಗಿಸಿ ನಿಶ್ಚಿಂತೆಯಿಂದ ಮಲಗಿದವರೂ ಇದ್ದಾರೆ. ಸದಾ ಸುಣ್ಣದ ಭಟ್ಟಿಯ ಧೂಳೆಬ್ಬಿಸುವ ಸುಣಗಾರರೂ ಇಲ್ಲಿದ್ದಾರೆ. ಇಡೀ ದಕ್ಷಿಣ ಧಾರವಾಡದ ಹೊಲಸನ್ನೆಲ್ಲ ತನ್ನ ಉದರದಲ್ಲಿ ತುಂಬಿಕೊಂಡು ಮೂಕವಾಗಿ ರೋಧಿಸುತ್ತಿರುವ ಕೋಳಿ ಕೆರೆ ಇವಕ್ಕೆಲ್ಲ ಕಿರೀಟಪ್ರಾಯವಾದುದು.

ಮನುಷ್ಯ ಇಡೀ ಜಗತ್ತನ್ನು ನಡುಗಿಸಬಲ್ಲ ಶಕ್ತಿ, ಯುಕ್ತಿ ಎರಡನ್ನೂ ಉಳ್ಳವ. ಆದರೆ ನಿಸರ್ಗ ಎಂಬ ಕೌತುಕದ ಮುಂದೆ ತೀರ ಕುಬ್ಜ. ವೈಜ್ಞಾನಿಕ ವಿಷಯಗಳ ಖ್ಯಾತ ಅಂಕಣಕಾರ ನಾಗೇಶ ಹೆಗಡೆ ಹೇಳುತ್ತಾರೆ.." ಭೂಮಿಗೆ ಈಗ ಜ್ವರ ಬಂದಿದೆ. ಸದ್ಯದಲ್ಲಿಯೇ ನೆತ್ತಿಗೆ ಏರಲಿದೆ. ಸಕಾಲಿಕವಾಗಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸದೇ ಹೋದರೆ ನಮ್ಮ ಬದುಕು ದುರ್ಭರವಾಗಲಿದೆ".

ಪರಿಸರವಾದಿ ಡಾ.ಶಿವರಾಮ ಕಾರಂತರ ಮಾತು ಇಲ್ಲಿ ಪ್ರಸ್ತುತ ಎನಿಸುತ್ತದೆ. ‘ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ’! ಈ ಮಾತು ಧಾರವಾಡದ ಬಾವಿಗಳ ಪಾಲಿಗಂತೂ ಸತ್ಯ.

ಮೊದಲೇ ನಾನು ಉಲ್ಲೇಖಿಸಿರುವಂತೆ ಈ ಕೋಳಿಕೆರೆಗೆ ತಾಗಿಕೊಂಡು ಕುಡಿಯಲು ಯೋಗ್ಯವಾದ ೨ ಬಾವಿಗಳಿವೆ ಎಂದರೆ ನೀವು ನಂಬಬೇಕು. ಒಂದು ಬಾವಿಯನ್ನು ಮಡಿವಾಳರು ಬಟ್ಟೆ ತೊಳೆಯಲು ಹಾಗು ೭೦ ಅಡಿ ದೂರದ ಎರಡನೇ ಬಾವಿಯನ್ನು ಕುಡಿಯಲು ಬಳಸುತ್ತಾರೆ. ಈ ಬಾವಿಗಳು ಬ್ರಿಟೀಷರ ಕಾಲದಲ್ಲಿ ಕಟ್ಟಿಸಲ್ಪಟ್ಟಿವೆ. ೯೦ ವರ್ಷಗಳ ಪೂರ್ವದಲ್ಲಿ ೪೦ ಅಡಿ ಆಳ, ೧೦ ಅಡಿ ಅಗಲ ತೋಡಿಸಲ್ಪಟ್ಟಿವೆ.

ಕಮಲ ಕೆಸರಲ್ಲಿ ಹುಟ್ಟಿದರೂ ತನ್ನ ಸೌಂದರ್ಯದಿಂದಾಗಿ ಜನರನ್ನು ಆಕರ್ಷಿಸುತ್ತದೆ. ಹಾಗೆ ಈ ಬಾವಿಗಳು ಕೂಡಾ ತನ್ನ ಸುತ್ತಲೂ ಕೊಳಚೆ ನೀರು ಆವರಿಸಿ, ಗಬ್ಬೆದ್ದು ನಾರಿದರೂ ತನ್ನ ನೀರಿನ ಸಿಹಿ ಗುಣ ಮಾತ್ರ ಕಳೆದುಕೊಂಡಿಲ್ಲ. ಸುಮಾರು ವರ್ಷಗಳಿಂದ ಜನರು ಈ ಬಾವಿಯ ನೀರನ್ನು ಕುಡಿಯಲು ಬಳಸುತ್ತ ಬಂದಿದ್ದಾರೆ. ಇಂದಿಗೂ ಸಹಿತ ಮಡಿವಾಳ ಜನಾಂಗದ ಹತ್ತು ಕುಟುಂಬಗಳು ಈ ನೀರನ್ನು ಬಳಸುತ್ತಿವೆ. ಮತ್ತೊಂದು ವಿಶೇಷವೆಂದರೆ ಇಲ್ಲಿಯವರೆಗೆ ಯಾವುದೇ ಖಾಯಿಲೆಯಿಂದ ಜನ ನರಳಿಲ್ಲ. "ಈ ಸಿಹಿ ನೀರಿನ ಅಪರೂಪದ ಬಾವಿಯನ್ನು ಗಂಗಾದೇವಿ ನಮಗೆ ಕರುಣಿಸಿದ್ದಾಳೆ" ಎಂದು ಮಡಿವಾಳ ಕುಂಟುಬದ ಹಿರಿಯ ಭೀಮಸೇನ್ ಹೇಳುತ್ತಾರೆ.

ಈ ಬಾವಿಯ ಸಂಪೂರ್ಣ ಜವಾಬ್ದಾರಿ ಮಡಿವಾಳರ ಸುಪರ್ದಿಗೆ ಸೇರಿದೆ. ಇಂತಹ ವೈಶಿಷ್ಟ್ಯವನ್ನು ಉಳಿಸಿ, ಬೆಳಿಸಿಕೊಂಡು ಹೋಗಬೇಕಾಗಿರುವುದು ಇಂದಿನ ಅವಶ್ಯಕತೆ.

ಸುರೇಶ ನಾಯ್ಕ್
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.

ಕಾಯಕದಲ್ಲಿ ಕೈಲಾಸ ಕಾಣುವ ಟಿ. ಸೋಮಶೇಖರ

Thursday, March 5, 2009

ಲ್ಲಾರು ಮಾಡುವುದು ಹೊಟ್ಟೆಗಾಗಿ.. ಗೇಣು ಬಟ್ಟೆಗಾಗಿ’ ಈ ಮಾತು ನಿತ್ಯ ಸತ್ಯ. ಆದರೆ ಇದೇ ಕಾಯಕವನ್ನು ಶೃದ್ಧೆಯಿಂದ ಮಾಡಿದಾಗ ವಿಶೇಷವಾದುದನ್ನು ಸಾಧಿಸಲು ಸಾಧ್ಯ. ಸಮಾಜ ಇಂತಹ ಸಾಧಕರನ್ನು ಗಮನಿಸುತ್ತದೆ. ತಕ್ಕ ಮಟ್ಟಿಗೆ ಗೌರವಿಸುತ್ತದೆ. ಆದರೆ ಅವರಿಗೆ ಪ್ರಸಿದ್ಧಿ ಸಿಕ್ಕಿರಲಿಕ್ಕಿಲ್ಲ. ಅವರು ಹೋರಾಟದ ಬದುಕಿಗೊಂದು ಭಾಷ್ಯ ಬರೆಯಬಲ್ಲವರು. ಅವರ ಹೋರಾಟದ ಹಾದಿ, ಬದುಕು ಇತರರಿಗೆ ಮಾದರಿ.

ಇಂಥವರನ್ನು ನೋಡಬೇಕೆ? ಮಾತನಾಡಿಸಬೇಕೆ ಅಂತಹ ಒಬ್ಬ ವಿಶಿಷ್ಟ ಶ್ರಮ ಜೀವಿಯನ್ನು? ಧಾರವಾಡದ ಗಾಂಧಿನಗರಕ್ಕೆ ಬನ್ನಿ. ನೋಡಲು ಆಕಷರ್ಕವಾಗಿ ಕಾಣುವ ಸಾಣಿಗೆಗಳು, ಅಷ್ಟೆ ಸುಂದರವಾದ ಸೇರುಗಳು. ಕೂಡಲೇ ಮನೆಗೆ ಕೊಂಡೊಯ್ಯಬೇಕು ಎಂಬ ತುಡಿತ ನಿಮ್ಮಲ್ಲಿ ಉಂಟಾಗದೇ ಇರದು. ಹುಟ್ಟಿದಾರಭ್ಯ ಪೋಲಿಯೊ ಪೀಡಿತನಾದರೂ ವಂಶಪಾರಂಪರ್ಯವಾಗಿ ಬಂದ ಕಲೆಯನ್ನು ಮುಂದುವರೆಸಿಕೊಂಡು ಬಂದ ಸೋಮಶೇಖರ್ ಅವರ ಉತ್ಸಾಹ ಮೆಚ್ಚುವಂತಹದು.

ಎಲ್ಲವೂ ಸರಿಯಾಗಿದ್ದರೂ, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾಡುವ ನಾವು ಈತನಿಂದ ಕಲಿಯಬೇಕಾದದ್ದು ಬಹಳವಿದೆ. ಒಂದು ಕಾಲನ್ನು ಪೋಲಿಯೊದಿಂದ ಕಳೆದುಕೊಂಡು ಅಂಗವಿಕಲನಾಗಿರುವ ಸೋಮಶೇಖರ್ ಸಾಣಿಗೆಗಳನ್ನು ತಯಾರಿಸಿ ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಾರೆ.

ಸೋಮಶೇಖರ್ ಮೂಲತ: ಶಿವಮೊಗ್ಗ ಜಿಲ್ಲೆಯವರು. ಅವರು ಅಂಡಿಜೋಗಿ ಜನಾಂಗಕ್ಕೆ ಸೇರಿದವರು. ಮರಾಠಿ ಭಾಷೆಯಲ್ಲಿ ಮಾತು. ಕಳೆದ ೨ ವರ್ಷಗಳಿಂದ ಧಾರವಾಡದ ಗಾಂಧಿನಗರದಲ್ಲಿ ನೆಲೆಸಿ ಸಾಣಿಗೆಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಲೆಯನ್ನು ಕಂಡು ಮಾನವೀಯತೆ ದೃಷ್ಟಿಯಿಂದ ಗಾಂಧಿನಗರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಕಮೀಟಿಯವರು ಬ್ಯಾಂಕ್ ಎದುರಿಗಿನ ಜಾಗವನ್ನು ಯಾವುದೇ ಬಾಡಿಗೆ ಇಲ್ಲದೆ ಕೊಟ್ಟಿದ್ದಾರೆ.ಸೋಮಶೇಖರ್ ಅವರಿಗೆ ೩ ಜನ ಮಕ್ಕಳು, ಮಕ್ಕಳು ವಿದ್ಯಾವಂತರಾಗಬೇಕೆಂದು ಗಾಂಧಿನಗರದ ಶಾಲೆಗೆ ಸೇರಿಸಿದ್ದಾರೆ. ಗುಡಿಸಿಲಿನಲ್ಲಿ ವಿದ್ಯುತ್ ದೀಪವಿಲ್ಲ. ಸೀಮೆ ಎಣ್ಣೆ ಅಥವಾ ಕ್ಯಾಂಡಲ್ ನಿಂದ ಬೆಳಕು. ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಡಜನರಿಗಾಗಿ ಐಶ್ವರ್ಯ ಸೌರವಿದ್ಯುದೀಪಗಳನ್ನು (Microfinancing Scheme) ಅಡಿಯಲ್ಲಿ ಕೊಡಮಾಡುತ್ತಿದೆ.ಇವರಿಗೊಂದು ದೊರಕಿಸುಕೊಡಬಹುದೇ?

ಕಿರಾಣಿ ಅಂಗಡಿ, ಹೊಟೆಲ್ಗಳಲ್ಲಿ ಇರುವ ತಗಡಿನ ಡಬ್ಬಿಗಳು, ಎಣ್ಣೆಯ ವ್ಯಾಪಾರಸ್ಥರ ಅಂಗಡಿಗಳಲ್ಲಿನ ಮಂಡಿಗಳು ಇವರ ಕಚ್ಚಾ ವಸ್ತುಗಳು.ಈ ತಗಡಿನ ಡಬ್ಬಿಗಳನ್ನು ಸುತ್ತಿಗೆಯಿಂದ ಹೊಡೆದು ಚೌಕಾಕಾರವಾಗಿ ಮಾಡಿ ಸಾಣಿಗೆ , ಹೆರೆಮಣೆ, ಬೇಕರಿ ಟ್ರೇ, ಕೇಕ್ ಬಾಕ್ಸ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ.

ಈಗಿನ ಯಾಂತ್ರಿಕ ಯುಗದಲ್ಲಿ ಮಿಕ್ಸರ-ಗ್ರ್ಯಾಂಡರ್, ಪ್ಯಾಕ್ಡ್ ಫುಡ್ ಭರ್ಜರಿ ಬಳಕೆಯಲ್ಲಿವೆ. ಸಾಣಿಗೆಗಳ ಮಾರಾಟ ಹೇಗೆ? ಎಂದು ಕೇಳಿದರೆ, ಫ್ಯಾಕ್ಟರಿ ಸಾಣಿಗೆಗಳಲ್ಲಿ ಬಹಳ ದೊಡ್ಡ-ದೊಡ್ಡ ರಂಧ್ರಗಳಿರುವುದರಿಂದ ಬೇಡಿಕೆ ಕಡಿಮೆ. ತಮ್ಮ ಸಾಣಿಗೆಗಳಿಗೆ ಬೇಡಿಕೆ ಹೆಚ್ಚು. ಅಲ್ಲದೇ ಹಳ್ಳಿಗಾಡಿನ ಪ್ರದೇಶದಲ್ಲಿ ಜನರು ಹೆಚ್ಚು-ಹೆಚ್ಚು ಕೊಂಡುಕೊಳ್ಳುತ್ತಾರೆ. ಅದೇ ರೀತಿ ಬೇಕರಿಗಳಲ್ಲಿ ಉಪಯೋಗಿಸುವ ಬೇಕರಿ ಟ್ರೇ, ಕೇಕ್ ಬಾಕ್ಸ್ ಮೌಲ್ಡ್ ಗೂ ಅಲ್ಪ-ಸಲ್ಪ ಬೇಡಿಕೆ ಇದೆ ಎನ್ನುತ್ತಾರೆ ಸೋಮಶೇಖರ.

೨೫ ತಗಡಿನ ಡಬ್ಬಿಗಳನ್ನು ಸಾಣಿಗೆಯಾಗಿ ಮಾಡಲು ೩ ದಿನ ಬೇಕಾಗುತ್ತದೆ. ೧ ದಿನಕ್ಕೆ ೫೦ ಸಾಣಿಗೆಗಳು ಮಾರಾಟವಾದ ಉದಾಹರಣೆ ಇದೆ. ಒಂದಕ್ಕೆ ಹೋಲ್ ಸೇಲ್ ದರದಲ್ಲಿ ೧೮-೨೦ ರೂಪಾಯಿಗೆ ಕೊಡುತ್ತೇವೆ. ಇದರಿಂದ ದಿನಕ್ಕೆ ೧೦೦-೧೫೦ ರೂಪಾಯಿ ಹಣ ಸಿಗುತ್ತದೆ. ಇದರಲ್ಲಿ ಖರ್ಚು ತೆಗೆದು ೮೦-೧೦೦

ರೂಪಾಯಿ ಉಳಿತಾಯವಾಗಿ ತಿಂಗಳಿಗೆ ೨೫೦೦ ರೂಪಾಯಿ ಆದಾಯ ಬರುತ್ತದೆ. ಅಂತೂ-ಇಂತೂ ಬದುಕು ಅಷ್ಟರಲ್ಲಿಯೇ ನಡೆದಿದೆ ಎಂದು ತಮ್ಮ ಸಾಹಸ ಹೇಳಿಕೊಂಡರು.

ಮಾಡುವ ಕೆಲಸಕ್ಕೆ ಸರಿಯಾಗಿ ಆದಾಯ ಬಾರದಿದ್ದರೆ ಕೈಕಟ್ಟಿ ಕುಳಿತುಕೊಳ್ಳದೇ ಛತ್ರಿ ರಿಪೇರಿ, ಬೀಗ ರಿಪೇರಿ, ಹಾಗೂ ಬ್ಯಾಟರಿ ರಿಪೇರಿಗಳನ್ನು ಊರು-ಊರುಗಳಿಗೆ ಹೋಗಿ ರಿಪೇರಿ ಮಾಡಿ ಜೀವನ ನಡೆಸುತ್ತೇನೆ ಎಂದು ಉತ್ಸಾಹಿ ಯುವಕ ಟಿ.ಸೋಮಶೇಖರ ಹೇಳುತ್ತಾರೆ.

ಅಬ್ಬಾ! ಅವರ ಅದಮ್ಯ ಶ್ರಮ ಜೀವನಕ್ಕೆ ಹಾಗೂ ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್.

ವಸೀಮ್ ಭಾವಿಮನಿ
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.

ಗಿಡಗಳಿಗೆ ಕಸಿ; ರೈತನಿಗೆ ಖುಷಿ!

Tuesday, March 3, 2009

ಮ್ಮದು ಕೃಷಿ ಸಂಸ್ಕೃತಿ ರಾಷ್ಟ್ರ. ಇಲ್ಲಿ ಕೃಷಿ ವ್ಯವಹಾರ ಅಲ್ಲ. ರೈತ ತನ್ನ ಜೀವನೋಪಾಯಕ್ಕಾಗಿ ಕಂಡುಕೊಂಡ ಉದ್ಯೋಗ ವ್ಯವಸಾಯ. ಆದರೆ ಅಭಿವೃದ್ಧಿ ರಥದ ಅಡಿಯಲ್ಲಿ ಸಿಲುಕಿದ ರೈತಾಪಿ ವರ್ಗ, ‘ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂಬುವಂತೆ ಬಿಂಬಿಸಲ್ಪಟ್ಟು, ದೇಶ ನಡೆಸುವ ನೊಗವನ್ನೇ ಹೊತ್ತಂತೆ ಯೋಚಿಸಿದೆವು.


ನಮ್ಮ ಹಿಂದಿನ ತಲೆಮಾರಿನ ರೈತನಿಗೆ ಅಂದಿನ ಕೂಲಿ, ಅವತ್ತಿನ ಹಸಿವನ್ನು ಇಂಗಿಸಿದರೆ ಅದೇ ಸ್ವರ್ಗವಾಗಿತ್ತು.
ಕಾಲ ಬದಲಾಗುತ್ತಾ ಬಂತು. ರೈತನೂ ಆಮಿಷಗಳಿಂದ ದೂರ ಉಳಿಯಲು ಸಾದ್ಯವಾಗಲಿಲ್ಲ. ತನ್ನ ಅಪರಿಮಿತ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ದುಡಿಮೆ ಅನಿವಾರ್ಯವಾಯಿತು. ‘ಗಳಿಕೆ-ಖರ್ಚು-ದುಡಿಮೆ-ಗಳಿಕೆ’ ಈ ವರ್ತುಲ ಬ್ರಹ್ಮಾಂಡದೆತ್ತರ ಬೆಳೆಯಲು ನೀರೆರೆದಿದ್ದು ನಮ್ಮ ಬುದ್ಧಿಶಕ್ತಿ . ಹಾಗಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಹಾಗು ಲಾಭ ಪಡೆಯಲು ಈ ಕಸಿ ಪದ್ಧತಿ ಬೆಳಕಿಗೆ ಬಂದಿತು.

ಉತ್ತಮ ಇಳುವರಿ ನೀಡುವಂತಹ ಆಹಾರ ಬೆಳೆಗಳು ಅಥವಾ ವಾಣಿಜ್ಯ ಬೆಳೆಗಳ ಕಾಂಡದ ಒಂದು ಸಣ್ಣ ತುಂಡಿನಿಂದ ಅದೇ ಪ್ರಜಾತಿಯ ಮತ್ತೊಂದು ಸಸ್ಯವನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆಗೆ ‘ಕಸಿ ಪದ್ಧತಿ’ ಎನ್ನಲಾಗುತ್ತದೆ. ಅಂದರೆ, ಇಳುವರಿ ನೀಡಿ, ಮುಪ್ಪಡರಿದ ಒಂದು ಸಸ್ಯದ ಕಾಂಡಕ್ಕೆ ಅತೀ ಉಪಯುಕ್ತವಾದ ಅದೇ ಪ್ರಭೇದದ ಸಸ್ಯ ಕಾಂಡವನ್ನು ಬೆಸೆಯುವದರಿಂದ ‘ನಿರುಪಯುಕ್ತ’ ಸಸಿ ಕೂಡ ಉಪಯುಕ್ತ.
ಕಸಿಯನ್ನು ಮುಖ್ಯವಾಗಿ ಮಾವು, ಹಲಸು, ಚಿಕ್ಕು, ಪೇರಲ, ದಾಸವಾಳ, ಗುಲಾಬಿ, ಬದನೆ ಈ ಪ್ರಭೇದಗಳಿಗೆ ಮಾಡಲಾಗುತ್ತದೆ. ಕಸಿ ಕಟ್ಟುವ ಉದ್ದೇಶಗಳು ಹಲವು. ಪ್ರಮುಖವಾಗಿ ಕಡಿಮೆ ಸಮಯದಲ್ಲಿ ಉತ್ತಮ ಇಳುವರಿ ಮತ್ತು ಪ್ರತಿಫಲ ಅಪೇಕ್ಷೆ.

ಉದಾಹರಣೆಗೆ ಮಾವು ಮರ. ಮಾವಿನ ಬೀಜವನ್ನು ನೆಟ್ಟು, ಅದು ಬೆಳೆದು ಪ್ರತಿಫಲವನ್ನು ನೀಡುವ ಹೊತ್ತಿಗೆ ಆರೆಂಟು ವರುಷಗಳು ಬೇಕು. ಈ ಕಸಿ ಪದ್ಧತಿಯನ್ನು ಅನುಸರಿಸಿದರೆ ಸುಮಾರು ಮೂರು ಅಥವಾ ನಾಲ್ಕು ವರುಷಗಳಲ್ಲಿ ಉತ್ತಮ ಫಸಲು ಪಡೆಯಬಹುದು. ಗುಣಮಟ್ಟದಲ್ಲಿ ಉತ್ತಮವಾದ ಅಂಶವನ್ನು ಗುರುತಿಸಬಹುದು.
ಕಸಿ ಪದ್ಧತಿಯನ್ನು ಕೈಗೆತ್ತಿಕೊಳ್ಳುವ ಮುನ್ನ ಕೆಲ ಅಂಶಗಳನ್ನು ನಾವು ಗಮನಿಸಬೇಕು. ಕಸಿಮಾಡಲು ಬೇಕಿರುವ ಮಾವಿನ ಸಸ್ಯದ ಉತ್ತಮವಾದ ಮತ್ತೊಂದು ಪ್ರಬೇಧದ ತಳಿ ನಮ್ಮಲ್ಲಿ ಇರಬೇಕು. ವಾಣಿಜ್ಯ ಬೆಳೆಗಳ ನಿಲಿಂಗ್ ವಂಶಾಭಿವೃದ್ಧಿಯ ವಿಧಾನಕ್ಕೆ ಕಸಿ ಪದ್ಧತಿ ಉತ್ತಮವಾದ ಉದಾಹರಣೆ. ಒಂದೇ ಜಾತಿಯ ಎರಡು ಸಸ್ಯಗಳನ್ನು ಬೆಸೆಯುವಲ್ಲಿ ಈ ಪದ್ಧತಿ ಸಹಾಯಕವಾಗಿದೆ. ಸಧೃಢವಾದ ಬೇರುಗಿಡದ ಮೇಲೆ ಉತ್ತಮ ಜಾತಿಯ ಟೊಂಗೆಯನ್ನು ಬೆಸಿಯುವುದೆ ಕಸಿ ಪದ್ಧತಿಯಲ್ಲಿ ಬಹು ಮುಖ್ಯ. ಈ
ಪದ್ಧತಿಯ ಪ್ರಯೋಜನಗಳೆಂದರೆ-
೧ ಹಳೆಯ ತಳಿಗಳ ಪುನರ್ ಸಂಸ್ಕರಣೆ ಹಾಗು ಅಭಿವೃದ್ಧಿ.
೨ ಅಲಂಕಾರಿಕ ಸಸ್ಯಗಳ ಅಭಿವೃದ್ಧಿ.
ಹಾಗೆಯೇ ಕಸಿ ಪದ್ಧತಿ ಹಲವಾರು ವಿಧಗಳನ್ನು ಹೊಂದಿದೆ. ಅವುಗಳೆಂದರೆ
* ಗೂಟಿ ಕಸಿ -ಹದವಾಗಿ ಬಲಿತ ಗಿಡದ ಕಾಂಡವನ್ನು ಮಧ್ಯೆ ಕತ್ತರಿಸಿ ಮಧ್ಯಭಾಗದಲ್ಲಿ ಅಡ್ಡವಾಗಿ ಸೀಳಬೇಕು. ಅದೇ ಜಾತಿಯ ಮತ್ತೊಂದು ಸಸ್ಯದ ಚಿಗುರನ್ನು ಬೆಸೆಯುವುದು ಗೂಟಿ ಕಸಿ ವಿಧಾನ.
* ಸಾಮಿಪ್ಯ ಕಸಿ - ಈ ಪದ್ಧತಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಕುಂಡದಲ್ಲಿ ಬೆಳೆಸಿದ ಸಸಿಯನ್ನು ತಾಯಿ ಮರದ ಹತ್ತಿರ ಬೆಸೆಯುವ ಕ್ರಿಯೆ. ಇದು ಚಿಗುರಲು ಸುಮಾರು ೨ ರಿಂದ ೩ ತಿಂಗಳುಗಳು ಬೇಕಾಗುತ್ತವೆ. ಈ ವಿಧಾನವನ್ನು ಬೃಹತ್ ಪ್ರಮಾಣದಲ್ಲಿ
ಅನುಸರಿಸಲು ಸಾದ್ಯವಿಲ್ಲ.
*ಓಟಿ ಕಸಿ- ಇದು ಎಳೆಯ ಗಿಡಗಳಿಗೆ ಕಸಿ ಮಾಡುವ ವಿಧಾನ. ಬೀಜದಿಂದ ಚಿಗುರೊಡೆದ ಎಳೆಯ ಗಿಡಕ್ಕೆ ಕಸಿ ಮಾಡಲಾಗುತ್ತದೆ. ಓಟಿ ಕಸಿಯನ್ನು ವ್ಯಾಪಕ ಪ್ರಮಾಣದಲ್ಲಿ ಮಾಡಲು ಸಾದ್ಯವಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಸಿಯು ಓಟೆಯಿಂದ ಬೇರೆಯಾಗದಂತೆ ನಿಗಾ ವಹಿಸಬೇಕು. ಒಂದು ವೇಳೆ ಬೇರೆಯಾದರೆ ಕಸಿ ಕಟ್ಟಿದ್ದು ವ್ಯರ್ಥ.
*ಮೃದು ಕಾಂಡ ಕಸಿ- ಹೆಸರೇ ಹೇಳುವಂತೆ ಮೆದುವಾದ ಸಸ್ಯಗಳಾದ ಬಾಳೆ ಮತ್ತು ಸೇವಂತಿಗೆ ಸಸ್ಯಳಿಗೆ ಕಾಂಡದ ಮೇಲಿರುವ ಲೇಪವನ್ನು ಕೊರೆದು ಆ ಜಾಗದಲ್ಲ್ಲಿ ಬೆರೆ ಕಾಂಡವನ್ನು ಬೆಸೆಯುವುದು.
*ಕುಡಿ ಕಸಿ- ಬಲಿತ ಮರಕ್ಕೆ ನಡುಭಾಗದಲ್ಲಿ ಆಂಗ್ಲ ಭಾಷೆಯ `V' ಆಕಾರದಲ್ಲಿ ಮೇಲಿನ ಕಾಂಡವನ್ನು ಸೀಳಿ ಆ ಜಾಗದಲ್ಲಿ ಉತ್ತಮ ಜಾತಿಯ ಕಾಂಡವನ್ನು ಬೇಸೆಯುವುದು. ಕಾಂಡವು ಬೆಸೆದುಕೊಂಡನಂತರ ಮರದ ಮೇಲ್ಭಾಗವನ್ನು ಕತ್ತರಿಸಲಾಗುತ್ತದೆ.
*ಗೂಟಿ ಕಟ್ಟುವುದು- ಈ ಪದ್ಧತಿಯಲ್ಲಿ ಕಸಿ ಕಟ್ಟುವ ಪೇರಲ, ದಾಳಿಂಬೆ ಗಿಡಗಳ ಕಾಂಡದ ಮಧ್ಯ ಭಾಗದಲ್ಲಿ ಮತ್ತೊಂದು ಕಾಂಡವನ್ನು ಮಣ್ಣಿನ ಉಂಡೆಯೊಂದಿಗೆ ಲೇಪಿಸಿ ಮೇಲಿನಿಂದ ಪ್ಲಾಸ್ಟಿಕ್ ಕೊಟ್ಟೆಯನ್ನು ಕಟ್ಟಬೇಕಾಗುತ್ತದೆ.
*ಕಣ್ಣು ಕಸಿ - ಸಸ್ಯದ ಎಲೆಗಳ ಕಂಕುಳಲ್ಲಿ ಇರುವ ಚಿಗುರು ಕಣ್ಣನ್ನು ಬಳಸಿಕೊಂಡು ಕಸಿ ಮಾಡುವ ವಿಶಿಷ್ಠ ವಿಧಾನ. ಬಾಳೆ,

ಗುಲಾಬಿ, ರಬ್ಬರಗಳಿಗೆ ಇದು ಸೂಕ್ತವಾಗಿದೆ. ಇದರಲ್ಲಿ ೨ ವಿಧಾನಗಳಿವೆ.
೧ ಆಯ್ ಬಡ್ಡಿಂಗ್
೨ ಪ್ಯಾಚ್ ಬಡ್ಡಿಂಗ್
ಕಸಿ ಕಟ್ಟುವ ಈ ಎರಡು ವಿಧಾನಗಳನ್ನು ಅನುಸರಿಸಲು ಸಸ್ಯಗಳ ಗಾತ್ರ ಮತ್ತು ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಕಸಿ ಪದ್ಧತಿಯು, ಹಳೆಯ ದೇಸಿ ತಳಿಗಳನ್ನು ಉಳಿಸಿಕೊಳ್ಳಲು, ನವೀಕರಿಸಲು ಮತ್ತು ಅಲಂಕಾರಿಕ ಸಸ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಡಿಕೆ, ತೆಂಗು, ಕಂಗು ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಕಸಿ ಕಟ್ಟುವುದನ್ನು ಉಪಕಸುಬಾಗಿ ಅಳವಡಿಸಿಕೊಂಡಿರುವುದು ಗಮನಾರ್ಹ. ಉತ್ತಮ ತಳಿ ಹಾಗು ಗುಣಮಟ್ಟದ ಇಳುವರಿ ಕೊಡುವ ಕಸಿ ಪದ್ಧತಿ ರೈತರಿಗೆ ವರದಾನವೇ ಸೈ.
ಗಣಪತಿ ಹೆಗಡೆ
ಎಂ.ಎ.ಜೆ.ಎಂ.
೪ ಸೆಮ್.
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

ಜಲ ಶುದ್ಧೀಕರಣ ಘಟಕದಿಂದ ಅಮ್ಮಿನಬಾವಿಯ ಎರಡು ಕೆರೆಗಳು ಅಶುದ್ಧ!

Tuesday, February 24, 2009

ತುಂಬಿದ ಹೊಳೆಯಾಗ ಕೊಂಬು ಕಾಣಿಸತಾವ

ಇಂಬುಳ್ಳ ಇನಿಯಾ ಬಸವಣ್ಣ / ಬರುವಾಗ/
ಗಂಗೆದ್ದು ಕೈ ಮುಗಿದಾಳ//

ಅಂತ ನಮ್ಮೂರು ಅಮ್ಮಿನಬಾವಿಯ ಅಮ್ಮ ಗಂಗಮ್ಮ ಕಾಶಿ ಹಾಡುತ್ತಿದ್ದರೆ, ಕಣ್ಣಮುಂದೆ ಅಮ್ಮಿನಬಾವಿ ಅಲ್ಲಿನ ಕೆರೆಗಳು ಹಾಗು ಹಸುರಿನಿಂದ ಕಂಗೊಳಿಸಿದ್ದ ಚಿತ್ರ ಕಟ್ಟುತ್ತದೆ. ಆದರೆ ಈಗ ಊರಿನಕ್ೆರೆಗಳು ಕಾಲನ ಗರ್ಭ ಸೇರುವ ತವಕದಲ್ಲಿವೆ. ಅಮ್ಮಿನಬಾವಿಯ ಬಸವಣ್ಣ ಇನ್ನೆಂದೂ ಕೋಡು ಮುಳುಗಿಸಿಕೊಳ್ಳುವಷ್ಟು ನೀರು ಕಾಣಲಾರ ಎಂಬ ಹತಾಷಭಾವ ನಮ್ಮನ್ನು ಆವರಿಸುತ್ತದೆ.

ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ೨ ದೊಡ್ಡ ಕೆರೆಗಳು ಊರಿಗೆ ಗಂಗೆಯಾಗಿದ್ದವು. ಆದರೆ ಈಗ ಮಲೀನವಾಗಿ ಕೃಷಗೊಂಡು ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭಿಸಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರಗಳಿಗೆ ಮಲಪ್ರಭಾನದಿಗೆ ನಿರ್ಮಿಸಲಾಗಿರುವ ಸವದತ್ತಿಯ ಶ್ರೀ ರೇಣುಕಾ ಎಲ್ಲಮ್ಮ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯಾಗುತ್ತದೆ. ಈ ನೀರು ಶುದ್ಧೀಕರಣಗೊಂಡು ಪೂರೈಕೆಯಾಗುವುದು ಅಮ್ಮಿನಬಾವಿಯ ಜಾಕ್ ವೆಲ್ ನಿಂದ. ಈ ಶುದ್ಧೀಕರಣ ಘಟಕದಿಂದ ಸ್ವಚ್ಛ ನೀರು ಅವಳಿ ನಗರಗಳಿಗೆ ಸರಬರಾಜಾದರೆ, ಕಲ್ಮಶಯುಕ್ತ ಹೊಲಸು ನೀರು ಅಮ್ಮಿನಬಾವಿಯ ಬ್ಯಾಡರ ಕೆರೆ ಮತ್ತು ಮಮ್ಡಕಿಕೆರೆಗೆ ಮೀಸಲು.

ಅಮ್ಮಿನಬಾವಿಯಲ್ಲಿ ೭ ಗಡಗಡಿಗಳ ಒಂದು ದೊಡ್ಡ ಬಾವಿ ಇದೆ. ಈ ಬಾವಿಯಿಂದ ೩೦೦ ಅಡಿಗಳ ಅಂತರದಲ್ಲಿದೆ ಬ್ಯಾಡರ ಕೆರೆ. ಈ ಕೆರೆಯ ನೀರು ಬಾವಿಯ ಸೆಲೆಗಳಿಗೆ ಮೂಲವಾಗಿದೆ. ಜೊತೆಗ ಈ ಕೆರೆಯ ವ್ಯಾಪ್ತಿಗೆ ಬರುವ ೧೦ ಕೊಳವೆ ಬಾವಿಗಳು ಸಹ ಪುನರ್ಜೀವಿತ ಗೊಳ್ಳುವುದು ಈ ನೀರಿನಿಂದಲೇ. ಹಾಗೆಯೇ ಕೃಷಿ ಕಾಯಕ ನಂಬಿರುವ ಗ್ರಾಮಸ್ಥರಿಗೆ ಅವರ ಜಾನುವಾರುಗಳಿಗೆ ಈ ಕೆರೆ ಜೀವದಾಯಿಯಾಗಿತ್ತು. ಈ ಕೆರೆ ತುಂಬಿ ಕ್ರಮೇಣ ಉಕ್ಕಿದಾಗ ಅಮ್ಮಿನಬಾವಿಯ ಹೊರವಲಯದಲ್ಲಿರುವ ಮಡಿಕೆ ಕೆರೆಗೆ ನೀರು ಸೇರುತ್ತಿತ್ತು. ಈ ಕೆರೆ ಸಹ ತುಂಬಿದಾಗ ಉಕ್ಕಿ ಹರಿದು ಮುಂದೆ ಗಾಣಗ್ಯಾರ ಹಳ್ಳದ ಮೂಲಕ ಬೆಣ್ಣೆ ಹಳ್ಳವನ್ನು ಸೇರುತ್ತಿತ್ತು.

ಬ್ಯಾಡರಕೆರೆಯು ೧೯೯೧ ರಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ನೀರಿನ ರಭಸಕ್ಕೆ ಒಡ್ಡು ಒಡೆದು ಊರೊಳಕ್ಕೆ ನುಗ್ಗಿ ಜನರ ಆಸ್ತಿ-ಪಾಸ್ತಿಗೆಲ್ಲ ಹಾನಿ ಮಾಡಿತ್ತು. ನಂತರ ಊರ ಜನರೆಲ್ಲ ಸೇರಿ ಕೆರೆಯ ಒಡ್ಡನ್ನು ಗಾರೆಯಿಂದ ಭದ್ರ ಪಡಿಸಿ ನೀರು ಪೋಲಾಗದಂತೆ, ಮಳೆಗಾಲದಲ್ಲಿ ಜನ ಜೀವನ ಅಸ್ತವ್ಯಸ್ತಗೊಳಿಸದಂತೆ ವ್ಯವಸ್ಥೆ ಮಾಡಿದರು. ಆದರೆ ಈ ಗ್ರಾಮದ ಹತ್ತಿರದಲ್ಲಿಯೇ ಜಲ ಶುದ್ಧೀಕರಣ ಘಟಕ ಸ್ಥಾಪನೆಗೊಂಡನಂತರ ಈ ಹಳ್ಳಗಳಲ್ಲಿ ಹೂಳು ತುಂಬಲಾರಂಭಿಸಿತು. ಗ್ರಾಮ ಪಂಚಾಯಿತಿ ಸಹ ತನ್ನ ಮುತುವರ್ಜಿ ವಹಿಸಿ ಸಾಕಷ್ಟು ಬಾರಿ ಹೂಳೆತ್ತಿಸಿ, ಕೆರೆಯ ಪಾತಳಿ ಬರಿದು ಮಾಡಿತ್ತು. ಆದರೆ ಈದು ಬಿಡದ ಕರ್ಮ ಎಂಬುದು ಅನುಭವಕ್ಕೆ ಬರುತ್ತಲೇ ೨೦೦೩ರಲ್ಲಿ ಕೊನೆಯ ಬಾರಿಗೆ ಈ ಎರಡೂ ಕೆರೆಗಳ ಹೂಳೆತ್ತಿಸಿ ತನ್ನ ಕೈ ತೊಳೆದುಕೊಂಡಿತು.

೨೦೦೮ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರು ಜಲ ಶುದ್ಧೀಕರಣ ಘಟಕದಿಂದ ಕೆರೆಗೆ ಬರುವ ಮಣ್ಣು ಮಿಶ್ರಿತ ನೀರಿನಿಂದ ಹೂಳು ತುಂಬುತ್ತಿದ್ದು, ಅದನ್ನು ತಡೆಯುವಂತೆ ಹಾಗು ಸದ್ಯ ೨ ಕೆರೆಗಳ ಹೂಳೆತ್ತಿಸುವಂತೆ ಸಂಬಂಧಪಟ್ಟವರಿಗೆ ಅರಿಕೆ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಶುದ್ಧೀಕರಣ ಘಟಕದ ನೀರು ಕೆರೆಗೆ ಸೇರುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಕೆರೆಗಳಲ್ಲ್ಲಿ 'ವಾಟರ್ ಹೈಸಿಂಥ್' ಹಾಗು 'ವಾಟರ್ ಲೆಟ್ಟೂಸ್' ಜಾತಿಯ ಕಸ ಬೆಳೆದು ಇಡೀ ಪ್ರದೇಶ ಆವರಿಸಿದೆ.ಗ್ರಾಮಸ್ಥರು ಶ್ರಮದಾನದ ಮೂಲಕ ತಮ್ಮ ಕೆರೆಗಳನ್ನು ಉಳಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಅದಕ್ಕೆ ತಗಲುವ ವೆಚ್ಚವನ್ನು ಧಾರವಾಡ ಜಿಲ್ಲಾ ಪಂಚಾಯಿತಿ ಅಥವಾ ಜಲಮಂಡಳಿ ವಹಿಸಿಕೊಂಡರೆ ಕಾಲನ ಗರ್ಭ ಸೇರುವ ತವಕದಲ್ಲಿರುವ ೨ ಕೆರೆಗಳೂ ಬದುಕಿಕೊಳ್ಳಲಿವೆ.

ಮಂಜುನಾಥ ಯಡಳ್ಳಿ
ಪಿ.ಜಿ.ಡಿ.ಜೆ.ಎಂ. ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ- ೨೯

೭ ದಶಕಗಳು ನವಲಗುಂದಕ್ಕೆ ನೀರುಣಿಸಿದ ನೀಲಮ್ಮನ ಕೆರೆ ಈಗ ಇತಿಹಾಸ ಪುಟಕ್ಕೆ.

ನೀರಿಗೂ ನವಲಗುಂದಕ್ಕೂ ದಶಕಗಳ ಎಣ್ಣೆ-ಸೀಗಿಕಾಯಿ ಸಂಬಂಧ! ಕುಡಿಯುವ ನೀರಿನ ಬರ ಎಂದರೆ ನವಲಗುಂದದ್ದು ಎಂಬುವಷ್ಟು ಜನಜನಿತ ಇಲ್ಲಿನ ಪರಿಸ್ಥಿತಿ. 'ನೀರಿಲ್ಲದ ಊರು ನವಲಗುಂದ' ಕ್ಕೆ ಕುಡಿಯುವ ನೀರಿನ ಕೆರೆಯನ್ನು ೧೯೩೮ರಲ್ಲಿ ಕಟ್ಟಿಸಿ, ಪುಣ್ಯ ಕಟ್ಟಿಕೊಂಡವರು ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯರ ಸಹೋದರಿ ನೀಲಮ್ಮನವರು. ಅನೇಕ ದಶಕಗಳಿಂದ ಇಡೀ ನವಲಗುಂದ ಊರಿಗೆ ಅವರ ಹೆಸರಿನಲ್ಲಿಯೇ ಇರುವ ಈ ಕೆರೆ ಜೀವದಾಯಿಯಾಗಿತ್ತು. ಶಿರಸಂಗಿಯ ಲಿಂಗರಾಜ ದೇಸಾಯರು ತಮ್ಮ ತಂಗಿ ನೀಲಮ್ಮನವರಿಗೆ ೧೯ ಎಕರೆ ಜಮೀನನ್ನು ಕಾಣಿಕೆಯಾಗಿ ನೀಡಿದ್ದರು. ಆದರೆ ಈ ತಾಯಿ ನವಲಗುಂದದ ಜನಕ್ಕೆ ಸ್ವಚ್ಛ ಕುಡಿಯುವ ನೀರು ಒದಗಿಸುವ ಘನ ಉದ್ದೇಶದಿಂದ ತಮ್ಮ ಜಮೀನಿನಲ್ಲಿಯೇ ದೊಡ್ಡ ಕೆರೆಯನ್ನು ನಿರ್ಮಿಸಿದರು. ಜನತೆಗೆ ಕುಡಿಯುವ ನೀರನ್ನು ಒದಗಿಸಿ ಅವಿಸ್ಮರಣೀಯ ಕಾರ್ಯ ಮಾಡಿದರು.

ಕಾರಣ ನವಲಗುಂದ ಪುರಸಭೆ ಮನೆಗಳಿಗೆ 'ಶಾಸ್ತ್ರಕ್ಕೆ' ಎಂಬುವಂತೆ ತಲುಪಿಸುತ್ತಿದ್ದ ನಲ್ಲಿಯ ನೀರು ಬಳಸಲು ಸಹ ಅಯೋಗ್ಯವಾದ ಕಹಿ ನೀರಾಗಿತ್ತು. ಇನ್ನು ಆ ನೀರನ್ನು ಕುಡಿಯಲು ಬಳಸಿದರೆ.. ಅಡ್ಡ ಪರಿಣಾಮಗಳನ್ನು ದೇವರೆ ಬಲ್ಲ. ಹಾಗಾಗಿ ಜನರೆಲ್ಲ ಈ ನೀಲಮ್ಮನ ಕೆರೆಯ ನೀರನ್ನೇ ನಂಬಿ ಬದುಕಿದ್ದರು. ಬೆಳಗಾಗುತ್ತಲೇ 'ಯಾರ್ಯಾರ ನೆನೆಯಲಿ' ಬದಲು 'ಯಾವ ಯಾವ ಬಣ್ಣದ ಕೊಡ ಇಂದು ಬಳಸಿ ನೀರು ಹೊರಲಿ' ಎಂಬಂತೆ ಸುಪ್ರಭಾತ ಮನೆ ಮನೆಗಳಲ್ಲಿ ಕೇಳುತ್ತಿತ್ತು. ಜನ ನೂರಾರು ಕೊಡಗಳನ್ನು ಟ್ರ್ಯಾಕ್ಟರ್, ಬಂಡಿ, ತಳ್ಳುವ ಗಾಡಿ, ಮೋಟಾರ್ ಸೈಕಲ್, ಸೈಕಲ್ ಹೀಗೆ ಹತ್ತು ಹಲವಾರು ವಿಧದಲ್ಲಿ ನೀರು ಹೊರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದರು.

ಊರಿನ ಶ್ರೀಮಂತರಿಗಾದರೆ ಹಣ ಕೊಟ್ಟು ಕುಡಿಯುವ ನೀರು ಪಡೆಯುವ ಭಾಗ್ಯವಿತ್ತು. ಆದರೆ ಬಡವರಿಗೆ ನೀಲಮ್ಮನಕೆರೆ ಆಧಾರವಾಗಿತ್ತು. ಈಗ ಅದು ಇತಿಹಾಸದ ಪುಟಗಳನ್ನು ಸೇರುವ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾರಣ ನವಲಗುಂದಕ್ಕೆ ಈಗ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಂಡು ಮನೆ ಮನೆಗಳಿಗೆ ನಲ್ಲಿಯ ಮೂಲಕ ಒಳ್ಳೆಯ ನೀರು ಸರಬರಾಜಾಗತೊಡಗಿದೆ. ಹಾಗಾಗಿ ನೀಲಮ್ಮನ ಕೆರೆ ಅವಜ್ಞೆಗೆ ಒಳಗಾಗಿದೆ. ಮೊದಲು ಪುರಸಭೆಯೇ ಈ ಕೆರೆಯ ಸುಪರ್ದಿ ವಹಿಸಿತ್ತು. ಕೆರೆಯನ್ನು ಕಾಯಲು ಕಾವಲುಗಾರರನ್ನು ನಿಯುಕ್ತಿಗೊಳಿಸಿತ್ತು. ಕೆರೆಯ ಮುಂಭಾಗದಲ್ಲಿ ಸುಂದರ ಕಮಾನು ನಿಲ್ಲಿಸಿ ನೀಲಮ್ಮನ ಜಲಾಶಯ ಎಂದು ಫಲಕ ಕೂಡ ಹಾಕಿಸಿತ್ತು. ಅಕ್ಕ ಪಕ್ಕ ಕೆರೆಯ ದಂಡೆಯ ಮೇಲೆ ಸುಂದರ ಹೂದೋಟವನ್ನು ನಿರ್ಮಾಣಮಾಡಿತ್ತು. ನವಲಗುಂದದ ಜನ ಬೆಳಿಗ್ಗೆ ಇಲ್ಲಿಗೆ ವಾಯು ವಿಹಾರಕ್ಕೆಂದು ಕೆರೆಗೇ ಬರುತ್ತಿದ್ದರು.

ಇಂದು ಮನೆ ಮನೆಗೆ ನಲ್ಲಿ ನೀರು ತಲುಪುತ್ತಲೇ ಕೆರೆ ನೀರು ಹಾಳಾಗ ತೊಡಗಿತು. ಆರೋಗ್ಯ ಇಲಾಖೆ ಈ ನೀರನ್ನು ಪರಿಶೀಲಿಸಿ 'ಕುಡಿಯಲು ಅಯೋಗ್ಯ ನೀರು' ಎಂದು ಪ್ರಮಾಣೀಕರಿಸಿದೆ. ಆರೋಗ್ಯ ಇಲಾಖೆಯ ಎಚ್ಚರಿಕೆಯನ್ನು ಕಡೆಗಣಿಸಿ ಈ ನೀರನ್ನು ಬಳಸಿ ದವಾಖಾನೆಗೆ ದಾಖಲಾದ ಪ್ರಕರಣಗಳು ಇಂದು ಕೂಡ ಸಾಕಷ್ಟಿವೆ. ಹಬ್ಬ/ ಹರಿದಿನ ಹಾಗು ಜಾತ್ರೆ, ಉತ್ಸವ ಮತ್ತು ಸಂತೆಯ ದಿನಗಳಂದು ಸಾಕಷ್ಟು ಸಂಖ್ಯೆಯಲ್ಲಿ ಅಕ್ಕ-ಪಕ್ಕದ ಹಳ್ಳಿಗಳಿಂದ ನವಲಗುಂದಕ್ಕೆ ಬರುವ ಜನರಿಗೆ ಹೊಟೇಲ್ ಮಾಲೀಕರು ಇದೇ ನೀರನ್ನು ಕುಡಿಯಲು ಪೂರೈಸುತ್ತಿದ್ದಾರೆ! ೭೦ ದಶಕಗಳ ಜೀವದಾಯಿ ಕೆಲವೇ ವರ್ಷಗಳಲ್ಲಿ ಪ್ರಾಣ ಇಂಗು ಗುಂಡಿಯಾಗಿ ಮಾರ್ಪಡುತ್ತಿದೆ.

ನವಲಗುಂದ ಪುರಸಭೆ ಈ ಕೆರೆಯನ್ನು ಉಳಿಸಲು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಿತ್ತು. ಆದರೆ ಉದಾಸೀನ ಧೋರಣೆ ತಾಳಿದೆ. ಈ ನೀಲಮ್ಮನ ಕೆರೆಯನ್ನೇ ಅಭಿವೃದ್ಧಿ ಪಡಿಸಿ ಶುದ್ಧವಾದ ನೀರು ಪೂರೈಕೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದನ್ನು ಮರೆತ ಹಾಗೆ ಮೇಲ್ನೋಟಕ್ಕೆ ಕಾಣುತ್ತದೆ. ಇದೇ ರೀತಿ ಕೆರೆಯ ಅವ್ಯವಸ್ಥೆ ಮುಂದುವರೆದರೆ ಈ ಐತಿಹಾಸಿಕ ಕೆರೆ ಮರಣ ಶಯ್ಯೆಯಲಿ ಒರಗುವುದರಲ್ಲಿ ಸಂಶಯವಿಲ್ಲ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಊರಿನ ಕುರುಹಾಗಿ ಇದನ್ನು ಉಳಿಸಿಕೊಳ್ಳಲು ಪುರಸಭೆ ಒಂದು ಸಮರ್ಪಕ ಕ್ರಿಯಾ ಯೋಜನೆ ಸಕಾಲಿಕವಾಗಿ ತಯಾರಿಸಬೇಕಿದೆ.

ಕವಿತಾ ಹಳ್ಳಿ
ಎಂ.ಎ.ಜೆ.ಎಂ. ಪ್ರಥಮ ವರ್ಷದ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

ಪರಿಸರದ ಪ್ರತಿ ಪ್ರೀತಿ ಇಲ್ಲದ ಪ್ರೇಮಿಗಳ ತಾಣ: ನೃಪತುಂಗ ಬೆಟ್ಟ.

ಹೂಬಳ್ಳಿಯ ಹುಬ್ಬಳ್ಳಿ ಹಲವಾರು ವಿಷಯಗಳಿಗೆ ಖ್ಯಾತಿವೆತ್ತ ನಗರ. ವಾಣಿಜ್ಯ ನಗರಿ ಎಂದು ಪ್ರಸಿದ್ಧಿ ಪಡೆದಿರುವ ನಗರ ಅನೇಕ ಸುಂದರ ತಾಣಗಳ ಬೀಡು. 'ಐಕಾನಿಕ್' ತಾಣಗಳ ದೃಷ್ಟಿಯಿಂದ ಇಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲವುಗಳು ಎಂದರೆ, ಮೂರುಸಾವಿರ ಮಠ, ನೃಪತುಂಗ ಬೆಟ್ಟ ಹಾಗು ಉಣಕಲ್ ಕೆರೆ.

ಜನ ಇಂದಿನ ಯಾಂತ್ರಿಕ ಜೀವನಕ್ಕೆ ಅಂಟಿಕೊಂಡು ಯಂತ್ರಮಾನವರಾಗಿದ್ದಾರೆ. ಈ ಭರಾಟೆಯ ಜೀವನದಿಂದ ತುಸು ಪ್ರಶಾಂತತೆ, ಮಾನಸಿಕ ನೆಮ್ಮದಿ ಅರಸಿ ನೃಪತುಂಗ ಬೆಟ್ಟದ ತಪ್ಪಲಿಗೆ ಜನ ಚಾರಣ ಕೈಗೊಳ್ಳುತ್ತಾರೆ. ನಗರದ ಗಲಿಬಿಲಿಯಿಂದ ದೂರ ಉಳಿಯಲು, ರಜೆಯ ಮಜಾ ಅನುಭವಿಸಲು ಸಹ ಜನ ಇಲ್ಲಿಗೆ ಪ್ರತಿ ಭಾನುವಾರ ಭೇಟಿ ನೀಡುತ್ತಾರೆ. ಹಾಗಾಗಿ ಎಲ್ಲ ವಯೋಮಾನದವರನ್ನು ಆಕರ್ಷಿಸಿರುವ ತಾಣವಿದು. ನಗರದಿಂದ ೪ ಕಿ.ಮೀ. ದೂರದಲ್ಲಿ ಹಾಗು ಉಣಕಲ್ ರೈಲು ನಿಲ್ದಾಣದಿಂದ ಅತಿ ಸಮೀಪದಲ್ಲಿದೆ ನೄಪತುಂಗ ಬೆಟ್ಟ.

ಮೊದಲಿನಿಂದಲೂ ಆರೋಗ್ಯದ ಪ್ರತಿ ಕಾಳಜಿ ಇರುವ ಕೆಲ ಜನ ನಿತ್ಯ ವಾಯು ವಿಹಾರಕ್ಕೆ ಇಲ್ಲಿಗೆ ಬರುತ್ತಾರೆ. ಅವರಲ್ಲಿ ಜಯಕರ ಮಸ್ಲೆ ಕೂಡ ಒಬ್ಬರು. ಇಲ್ಲಿನ ಬೆಟ್ಟದ ರಸ್ತೆಗಳು ಯುವ ವಾಹನ ಚಾಲಕರಿಗೆ ಮೋಜಿನ ತಾಣವಾಗಿ ಪರಿಣಮಿಸಿದ್ದು, ಕುಣಿತ ಹಾಗು ಕುಡಿತ ಎರಡಕ್ಕೂ ಹಿಡಿತವಿಲ್ಲ ಎನ್ನುತ್ತಾರೆ. ಡಾ.ರವಿ ಕಲಘಟಗಿ ಅವರು ಹೇಳುವಂತೆ, ರಸ್ತೆಯ ತಿರುವುಗಳಲ್ಲಿ ಅತ್ಯಂತ ವೇಗವಾಗಿ ವಾಹನ ಓಡಿಸುವ ಚಾಳಿ ಇಟ್ಟುಕೊಂಡಿರುವ ಯುವಕರು ಅನೇಕರ ಪ್ರಾಣಕ್ಕೆ ಎರವಾಗಿ ಪರಿಣಮಿಸಿದ್ದಾರೆ ಎಂದು ಬೇಸರದಿಂದ ನುಡಿಯುತ್ತಾರೆ.

ರಜಾದಿನಗಳಂದು ಇಲ್ಲಿಗೆ ಭೇಟಿ ನೀಡುವ ಜನ, ತಮ್ಮೊಂದಿಗೆ ತಂದ ತಿನ್ನುವ ಸಾಮಗ್ರಿ ಬಳಸಿ ನಂತರ ಬಿಸಾಕಿ ಹೋಗುವ ಪರಿ ಪರಿಸರ ಪ್ರೇಮಿಗಳ ಮನ ಕಲಕುತ್ತದೆ. ಬಳಸಿದ ಮೇಲೆ ವ್ಯವಸ್ಥಿತವಾಗಿ ಬಿಸಾಡಲು ಅಲ್ಲಲ್ಲಿ ಕಸದ ತೊಟ್ಟಿಯ ವ್ಯವಸ್ಥೆ ಮಾಡಲಾಗಿದ್ದರೂ ಬಳಸುವ ಪೌರ ಪ್ರಜ್ಞೆಯ ಕೊರತೆ ಎದ್ದುಕಾಣುತ್ತದೆ. ಹಾಗೆಯೇ ವಿಘ್ನ ಸಂತೋಷಿಗಳ ಹಲವಾರು ಭಿತ್ತಿ ಬರಹ, ಕುಚೇಷ್ಟೆಗಳು ಸಹ ಈ ತಾಣವನ್ನು ತಕ್ಕ ಮಟ್ಟಿಗೆ ಅಂದ ಗೆಡಿಸುವಲ್ಲಿ ಯಶಸ್ವಿಯಾಗಿವೆ.

ಆದರೂ ಈ ಬೆಟ್ಟ ಹಾಗು ಅಲ್ಲಿನ ಪರಿಸರವನ್ನು ಮೊದಲಿನಂತೆ ಕಾಪಾಡಲು ಕೆಲ ಯುವಜನ ಪಡೆ ಟೊಂಕಕಟ್ಟಿ ನಿಂತಿದೆ ಎನ್ನುವುದೇ ಸಮಾಧಾನದ ಸಂಗತಿ. ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಫೆಲೋಷಿಪ್ ಪಡೆದು 'ಸೋಸಿಯಲ್ ಆಂತ್ರಿಪ್ರ್ಯುನರ್ ಶಿಪ್' ತರಬೇತಿ ಪಡೆಯುತ್ತಿರುವ ಕೆಲ ಸಾಹಸಿಗಳ ತಲೆಯಲ್ಲಿ ಈ ವಿಷಯ ಹೊಕ್ಕಿದ್ದೇ ತಡ ಕ್ರಿಯಾಯೋಜನೆ ಸಿದ್ಧವಾಯಿತು. 'ಪ್ರೊಜೆಕ್ಟ್ ಫ್ಲೇಮ್ ಆರೆಂಜ್' ಹೆಸರಿನ ಪಡೆ ವಿಶೇಷ ಯೋಜನೆಯನ್ನು ಶ್ರಮದಾನದೊಂದಿಗೆ ಅನುಷ್ಠಾನಗೊಳಿಸಲು ಮುಂದಾಯಿತು. ಸರಿ ಹಣ ಹೊಂದಿಸುವುದು ಹೇಗೆ?

ಈ ಯೋಜನೆಯ ಕರ್ಣಧಾರತ್ವ ವಹಿಸಿದ ಕೇರಳದ ಅಶುತೋಷ, ಮುಂಬೈಯ ಸಾಹಿನಾ ಹಾಗು ಬೆಂಗಳೂರಿನ ಮಧು ಅತ್ಯಂತ ಆಶಾವಾದಿಗಳಾಗಿ ಕಾರ್ಯಾರಂಭ ಮಾಡಿದರು. ಬೆಳಿಗ್ಗೆ ವಾಯು ವಿಹಾರಕ್ಕೆಂದು ಬರುವ ಜನರಿಂದಲೇ ಬೆಟ್ಟದ ಸೌಂದರ್ಯೀಕರಣಕ್ಕಾಗಿ ಹಣ ಪಡೆಯಲು ಹುಂಡಿ ತಯಾರಿಸಿದರು. ಮೊದಲನೇ ದಿನ ವಿಷಯದ ಅರಿಕೆ ಮಾಡಿಸಿದರು. ಕ್ರಮೇಣ ಅಲ್ಲಿನ ಜನಕ್ಕೆ ಇವರ ಕತೃತ್ವ ಶಕ್ತಿಯಲ್ಲಿ ನಂಬಿಕೆ ಹುಟ್ಟಿ ಉದಾರ ಮನಸ್ಸಿನಿಂದ ದೇಣಿಗೆ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ೨೦ ಜನ ಸ್ವಯಂ ಸೇವಕರು, ಅಂದ ಗೆಟ್ಟಿದ್ದ ಅಲ್ಲಿನ ಕಾಂಕ್ರೀಟ್ ಬೆಂಚ್, ಬಸ್ ನಿಲ್ದಾಣ ಹಾಗು ಮಾರ್ಗ ಸೂಚಿ ಫಲಕಗಳಿಗೆ ತಮ್ಮ ಕೈಯಾರೆ ಬಣ್ಣ ಬಳಿದರು. ಕಿತ್ತು ಹೋಗಿದ್ದ ಮಕ್ಕಳ ಆಟಿಕೆಗಳಿಗೆ ತುಸು ದುರಸ್ಥಿ ಮಾಡಿ ಬಳಕೆಯ ಸ್ಥಿತಿಗೆ ತಂದರು.

ಹಾಗೆಯೇ, ಒಣಗಿ ನಿಂತ ಮರಗಳ ಪಾಲನೆಗೆ ತುಸು ಜೀವದಾನ ಮಾಡುವ ಅವಶ್ಯಕತೆ ಇತ್ತು. ಶ್ರಮದಾನದ ಮೂಲಕ ಗಿಡ ನೆಡುವುದು ಹಾಗು ಕಸದ ಕೊಂಪೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ಬದಲಾಯಿಸುವ ಪಣ ತೊಟ್ಟ ಹಸಿರು ಪಡೆ, ಸುಮಾರು ೧೦೦ ಗಿಡಗಳನ್ನು ತಂದು ವೃಕ್ಷಾರೋಪಣ ಸಹ ನೆರವೇರಿಸಿತು. ದೈನಂದಿನ ದೈಹಿಕ ಶ್ರಮದಾನದ ಭಾಗವಾಗಿ ಅವುಗಳಿಗೆ ಒಡ್ಡು ಕಟ್ಟಿ, ನೀರು ನಿಲ್ಲಿಸುವ ಕೆಲಸ ಸಹ ಮಾಡಲಾಯಿತು. ಬೆಟ್ಟದಿಂದ ಹರಿದು ಬರುವ ನೀರು ಪೋಲಾಗದಂತೆ ಈ ಮರಿ ಗಿಡಗಳಿಗೆ ಸಂಪರ್ಕ ಕಲ್ಪಿಸಿದ್ದಾಯಿತು. ಆದರೆ ಮಳೆ ಬಾರದಿದ್ದ ಸಂದರ್ಭದಲ್ಲಿ? ಮಹಾನಗರ ಪಾಲಿಕೆಯ ನೀರಿನ ಟ್ಯಾಂಕರ್ ಸ್ಥಳಕ್ಕೆ ತರಿಸಿ, ಪ್ಲಾಸ್ಟಿಕ್ ಬಾಟಲಿಗಳ ಮೂಲಕ ಪ್ರತಿಯೊಂದು ಗಿಡಕ್ಕೂ ನೀರು ಹಣಿಸಿ ಬದುಕಿಸುವ ಹರ ಸಾಹಸ ಈ ಪಡೆ ಮಾಡಿದೆ.

ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ದಿವಂಗತ ಪುಂಡಲೀಕ ಹುಗ್ಗಿ ಅವರ ಶ್ರಮ ಸದ್ಯ ಸಾರ್ಥಕವಾಗಿದೆ. ಅವರು ಹಚ್ಚಿ ಬೆಳೆಸಿದ, ಪಾತಿ ಕಟ್ಟಿ ಬೆಟ್ಟದ ನೀರನ್ನು ಎಲ್ಲ ಮನೆಗಳ ಗಿಡಗಳಿಗೆ ಉಣಿಸುತ್ತಿದ್ದ ಚಿತ್ರ ಇಂದಿಗೂ ಅಲ್ಲಿನ ನಿವಾಸಿಗಳ ಕಣ್ಣಿಗೆ ಕಟ್ಟಿದಂತಿದೆ. ಆದರೆ ಅವರ ನಂತರ ಯಾರು? ಎಂಬ ಯಕ್ಷ ಪ್ರಶ್ನೆಗೆ ಸಮರ್ಪಕ ಉತ್ತರ ಈಗ ಈ ಯುವ ಪಡೆ ನೀಡಿದೆ. ಬೆಳಿಗ್ಗೆ ವಾಯು ವಿಹಾರಕ್ಕೆ ಬರುವ ಹಿರಿಯ ಚೇತನಗಳೂ ಸಹ ಈಗ ಬಾಟಲಿಯಲ್ಲಿ ನೀರು ತಂದು ಕೆಲ ಗಿಡಗಳಿಗೆ ನೀರು ಉಣಿಸುವ ಕಾಯಕದಲ್ಲಿ ಸಂತೋಷದಿಂದ ತೊಡಗಿಕೊಂಡಿದ್ದಾರೆ. ಅಂತೂ ಗಟಾರುಗಳ ಮೂಲಕ ಬೆಟ್ಟದ ನೀರು ಪೋಲಾಗಿ ಹೋಗುತ್ತಿದ್ದುದನ್ನು ತಡೆದು ಇಂಗಿಸುವ ಪ್ರಯತ್ನಕ್ಕೆ ಕೈಹಾಕಿದ 'ಪ್ರೊಜೆಕ್ಟ್ ಆರೇಂಜ್ ಫ್ಲೇಮ್' ಪಡೆ ನಿಜಕ್ಕೂ ಅಭಿನಂದನೀಯ.

ಶಿಲ್ಪಾ ಭೋವಿ
ಎಂ.ಎ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿನಿ
ಐ.ಎಂಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ- ೨೯

ತೋಳನಕೆರೆಯ ಅಳಲಿನ ಕಥೆ

ತೋಳನಕೆರೆಯು ಈಗ ನಾಡತೋಳಗಳ ದಾಳಿಗೆ ಸಿಲುಕಿ 'ತೋಳನಕೇರಿ' ಆಗುವತ್ತ ದಾಪುಗಾಲು ಇಡುತ್ತಿದೆ!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೩೫ನೇ ವಾರ್ಡಿನ ತೋಳನಕೆರೆಯ ಒಟ್ಟು ವಿಸ್ತೀರ್ಣ ೨೩ ಎಕರೆ, ೩೨ ಗುಂಟೆ.

ವಾಣಿಜ್ಯ ನಗರಿಯ ವಾಣಿಜ್ಯ ಪಟುಗಳ ಕಣ್ಣು ಕುಕ್ಕದಿರುತ್ತದೆಯೇ? ಕೆರೆಯ ಸುತ್ತಲೂ ವ್ಯವಸ್ಥಿತ ಬಡಾವಣೆ ನಿರ್ಮಾಣಗೊಂಡು ದಶಕವೇ ಉರುಳುತ್ತಿದೆ. ಅತಿಕ್ರಮಣದ ಪರಿಣಾಮವಾಗಿ ಸದ್ಯ ೧೦ ರಿಂದ ೧೨ ಎಕರೆಗಳಷ್ಟು ಮಾತ್ರ ಕೆರೆ ಉಳಿದಿದೆ. ಸುತ್ತಲೂ ಅಷ್ಟೇ ಅವ್ಯವಸ್ಥೆ ರಾರಾಜಿಸುತ್ತಿದೆ. ಬಡಾವಣೆಯ ಫಲವಾಗಿ ಗಬ್ಬೆದ್ದು ನಾರುವ ಹೊಲಸೆಲ್ಲವನ್ನು ತನ್ನ ಉದರದಲ್ಲಿ ತುಂಬಿಕೊಂಡು ಮೂಕ ವೇದನೆ ಕೆರೆ ಅನುಭವಿಸುತ್ತಿದೆ.


೧೯೮೦ರಲ್ಲಿ ಇದೊಂದು ನಯನಮನೋಹರ ಕೆರೆಯಾಗಿತ್ತು. ಈ ಕೆರೆಯ ನೀರನ್ನು ಸುತ್ತಲಿನ ಬಡಾವಣೆಗಳಲ್ಲಿ ಬಳಸಲಾಗುತ್ತಿತ್ತು. ಪಟ್ಟಣ ಬೆಳೆದಂತೆ ಕೆರೆಯ ಸುತ್ತಲೂ ವಸತಿ ಸಂಕೀರ್ಣ ನಿರ್ಮಾಣಗೊಂಡಿತು. ಈಗ ಅದು ಕೇರಿ. ರವಿ ನಗರ, ಬಸವೇಶ್ವರ ನಗರ, ಲಕ್ಷ್ಮೀ ನಗರ, ಮಠಪತಿ ಲೇಔಟ್, ರೇಣುಕಾನಗರ, ಗಾಂಧಿ ನಗರ, ವಿವೇಕಾನಂದನಗರ, ಸೆಂಟ್ರಲ್ ಎಕ್ಸೈಜ್ ಕಾಲೋನಿ, ನೆಹರೂ ನಗರ ಒಂದನೇ ಹಂತ, ಕುಮಾರ ಪಾರ್ಕ್, ಸನ್ಮಾರ್ಗ ನಗರ, ಕಲ್ಬುರ್ಗಿ ಲೇಔಟ್, ಪದ್ಮಾವತಿ ಹೌಸಿಂಗ್ ಸೊಸಾಯಿಟಿ, ಗಣೇಶ್ ಲೇಔಟ್ ಹೀಗೆ ಅನೇಕ ಬಡಾವಣೆಗಳ ಒಳಚರಂಡಿ ನೀರನ್ನು ತೋಳನಕೆರೆಗೆ ಹರಿ ಬಿಡಲಾಗುತ್ತಿದೆ. ಹೀಗಾಗಿ ಮೊದಲು ಉಪಯೋಗಿಸಲು ಯೋಗ್ಯವಾಗಿದ್ದ ನೀರು ಈಗ ಚರಂಡಿ ನೀರಾಗಿ ಪರಿವರ್ತನೆಗೊಳ್ಳುತ್ತಿದೆ. ಈ ನೀರಿನ ದುರ್ವಾಸನೆ ಹಾಗು ಅನಾರೋಗ್ಯಪೂರ್ಣಾ ವಾತಾವರಣದಿಂದಾಗಿ ಜನ ದವಾಖಾನೆಗೆ ನಿತ್ಯ ಎಡತಾಕುವಂತಾಗಿದೆ.


ತೋಳನಕೆರೆಯ ದಂಡೆಯ ಹತ್ತಿರವೇ ವಾಸವಾಗಿರುವ ಶ್ಯಾಮಲಾ ಅವರು ಹೇಳುತ್ತಾರೆ.."ಅಯ್ಯೋ..ಈಗ ಗಬ್ಬು ನಾಥ. ಮೊದಲು ನಾವೆಲ್ಲ ಕುಡಿಯಾಕ ಬಳಸ್ತಿದ್ವಿ. ಈಗ ಕಸ ಹಾಕೋ ತೊಟ್ಟಿ ಥರ ಆಗಿಹೋಗೇತಿ. ನಮ್ಮ ಜನಕ್ಕೂ ಕಾಳಜಿ ಅಷ್ಟಕ್ಕಷ್ಟ".
ಕಳೆದ ೪ ವರ್ಷಗಳಿಂದ ನಗರದ ವಿವಿಧ ಬಡಾವಣೆಗಳಿಂದ ಹೊತ್ತು ತರಲಾದ ಮಣ್ಣು, ಕಾಂಕ್ರೀಟ್ ತ್ಯಾಜ್ಯವನ್ನು ಕೆರೆಗೆ ಹಾಕಿ ಹೂಳು ತುಂಬುವಂತೆ ಸಹ ಮಾಡಲಾಗುತ್ತಿದೆ. ಕೆರೆಯ ಈ ದಯನೀಯ ಪರಿಸ್ಥಿತಿ ಗಮನಕ್ಕೆ ಬರುತ್ತಲೇ ಅವಳಿ ನಗರ ಪಾಲಿಕೆಯ ಅಂದಿನ ಆಯುಕ್ತರಾಗಿದ್ದ ಪಿ.ಮಣಿವಣ್ಣನ್ ಸ್ವತ: ಭೇಟಿ ನೀಡಿ, ಸಮೀಕ್ಷೆ ಕೈಗೊಂಡಿದ್ದರು. ಕೆರೆಯ ಪುನರುಜ್ಜೀವನಕ್ಕೆ ಕ್ರಿಯಾಯೋಜನೆ ಸಲ್ಲಿಸುವಂತೆ ಸ್ಥಳೀಯ ವಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಈ ನಿರ್ಣಯ ಕೈಗೊಂಡ ಒಂದೇ ವಾರದಲ್ಲಿ ಮೈಸೂರಿಗೆ ಅವರ ವರ್ಗಾವಣೆಯಾಯಿತು. ಇದು ಬಹುಶ: ಕೆರೆಯ ದುರ್ದೈವ.


ಈ ಕೆರೆಯನ್ನು ಭೂ ಮತ್ತು ವಿಜ್ಞಾನ ಇಲಾಖೆಯವರು (ಸದ್ಯ ೧೨) ಇಟ್ಟಂಗಿ ಭಟ್ಟಿಯವರಿಗೆ ಕರಾರಿನ ಮೇರೆಗೆ ಉಪಯೋಗಿಸಲು ನೀಡಿದ್ದರು. ಆದರೆ ಇಲ್ಲಿನ ಇಟ್ಟಂಗಿ ಭಟ್ಟಿಯವರು ಕರಾರು ಅವಧಿ ಮುಗಿದಿದ್ದರೂ ಕೆರೆಯ ಸುತ್ತಮುತ್ತಲೂ ಇಟ್ಟಂಗಿ ತಯಾರಿಸುವಲ್ಲಿ ಮಗ್ನರಾಗಿದ್ದಾರೆ.


ತೋಳನಕೇರಿಗೆ ಸೇರಿಸಲಾಗಿರುವ ಸುತ್ತಮುತ್ತಲಿನ ಬಡಾವಣೆಗಳ ಗಟಾರುಗಳನ್ನು ಬೇರೆಡೆ ತಿರುಗಿಸಿ ಕೆರೆ ಕಾಪಾಡುವಂತೆ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆಯ ಗಮನ ಸೆಳೆಯುವ ಪ್ರಯತ್ನ ಮತ್ತೊಮ್ಮೆ ಕೂಡ ಮಾಡಿದ್ದಾರೆ. ಪಾಲಿಕೆ ಮಾತ್ರ ಕೆರೆಯ 'ಪಾಲಕ'ನಾಗಲು ಸಿದ್ಧವಿಲ್ಲ. ಈ ಚರಂಡಿ ನೀರನ್ನು ಬೇರೆ ಮಾರ್ಗವಾಗಿ ಕೆರೆ ದಾಟಿಸಿ ಸಾಗುಹಾಕಿದ್ದಾದರೆ ಮರಣ ಶೆಯ್ಯೆಯಲ್ಲಿರುವ ಕೆರೆ ತುಸು ಚೇತರಿಸಿಕೊಳ್ಳಬಹುದು. ಸ್ಥಳೀಯರು ಕೂಡ ತಮ್ಮ ಕೈಜೋಡಿಸಲು ಸಿದ್ಧರಿದ್ದಾರೆ. ಪಾಲಿಕೆ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಯ ಪುನರುಜ್ಜೀವಕ್ಕೆ ಮುಂದಾಗಬೇಕಿದೆ. ಕೆರೆಗಳನ್ನು ಹಾಳುಗೆಡವಿ ಕೇರಿಗಳನ್ನು ಸುಲಭವಾಗಿ ನಿರ್ಮಿಸಬಹುದು. ಆದರೆ ಕೇರಿಗಳನ್ನು ಕೆರೆಗಳನ್ನಾಗಿ ಅಷ್ಟು ಸುಲಭವಾಗಿ ಪರಿವರ್ತಿಸಬಹುದೇ?
ಖ್ಯಾತ ಪರಿಸರವಾದಿ ಡಾ.ಶಿವರಾಮ ಕಾರಂತರು ಹೇಳುತ್ತಿದ್ದರು.."ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ" ಈ ಮಾತು ಇಂದಿಗೂ ಪ್ರಸ್ತುತ.

ಕೋಮಲ ರಾಜಶೇಖರ ಮೋಟಗಿ
ಪಿ.ಜಿ.ಡಿ.ಜೆ.ಎಂ. ೧ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಮಹಾವಿದ್ಯಾಲಯ- ಹುಬ್ಬಳ್ಳಿ- ೨೯.

ಹುಬ್ಬಳ್ಳಿಯ ಉಣಕಲ್ ಕೆರೆ ಕಾಲನ ಗರ್ಭ ಸೇರುವತ್ತ.

ಪ್ರಕೃತಿದತ್ತ ಜೀವಿ ದ್ರವ್ಯ ನೀರು. ಜಗತ್ತಿನ ಎಲ್ಲ ಜೀವ ಕೋಟಿಗಳಿಗೆ ಇದು ಬದುಕಿಗೆ ಆಧಾರ. ನೀರನ್ನು ಸತತವಾಗಿ ಕುಡಿಯುವುದರಿಂದ ನೈಸರ್ಗಿಕವಾಗಿಯೇ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು. ಭಾರತೀಯ ಯೋಗ ವಿಜ್ಞಾನ ನೀರಿನ ಅಮೂಲ್ಯತೆಯನ್ನು ಸಮರ್ಪಕವಾಗಿ ಸಾರಿದೆ. ಆದರೂ ನಾವು ನೀರಿನ ಮೂಲಗಳನ್ನು ನ್ಯಾಯೋಚಿತವಾಗಿ ಬಳಸುವ ಮಾರ್ಗಗಳನ್ನು ಶೋಧಿಸುತ್ತಿಲ್ಲ ಎಂಬುದು ಆರೋಪ. ನಮ್ಮ ಭೂಮಿಯನ್ನು ಆವರಿಸಿರುವ ಒಟ್ಟು ನೀರಿನಲ್ಲಿ ಬಳಕೆಗೆ ಯೋಗ್ಯವಾದ ನೀರು ಶೇ. ೩ ರಷ್ಟು ಮಾತ್ರ! ಇದು ಚಿಂತನೆಗೆ ಈಡುಮಾಡುವಂತಹುದು.


ನಮ್ಮ ಹೂಬಳ್ಳಿಯ ಹತ್ತಿರದ ಉಣಕಲ್ ಕೆರೆ ಇಡೀ ನಗರಕ್ಕೆ ಮೆರಗು. ನಿತ್ಯ ಅವಳಿ ನಗರಗಳ ಮಧ್ಯೆ ಸಂಚರಿಸುವವರಿಗೆ ಈ ಕೆರೆ ವಿಶೇಷ ಆಕರ್ಷಣೆ. ಪ್ರಯಾಣಿಸುವವರು ಅತ್ತ ತಿರುಗಿ ಒಮ್ಮೆ ಕಣ್ಣು ಹಾಯಿಸದಿದ್ದರೆ ಏನೋ ಕಳೆದುಕೊಂಡ ಭಾವ. ಧಾರವಾಡದಿಂದ ಬರುವಾಗ ಎಡಬದಿಗೆ, ಹುಬ್ಬಳ್ಳಿಯಿಂದ ಹೋಗುವಾಗ ಬಲಬದಿಗೆ ಕಿಟಕಿಯ ಸೀಟು ಅಪೇಕ್ಷಿಸುವುದು ನಿತ್ಯದ ಪ್ರಯಾಸ. ಕಾರಣ ೧೮ ಕಿ.ಮೀ. ತಾಸುಗಟ್ಟಲೇ ಪ್ರವಾಸ ಪ್ರಯಾಸವಾಗದಿರಲಿ ಎಂದು! ಹಾಗೆಯೇ ಇಳಿಯಬೇಕಾದ ಸ್ಟಾಪ್ ಲೆಕ್ಕಹಾಕುವ ಗುಂಗಿನಲ್ಲಿ ಕೆರೆಯತ್ತ ಕಣ್ಣು ಹಾಯಿಸುವುದನ್ನು ಮರೆತಿದ್ದರೆ ಸಂಜೆ ಮರಳುವಾಗಾದರೂ ಒಮ್ಮೆ ನೋಡಿಯೇ ಹೋಗಬೇಕು ಎಂಬ ಮನದ ಇಂಗಿತ ತಣಿಸುವುದು ಸುಲಭವಲ್ಲ.

೧೮೯೩ರಲ್ಲಿ ಈ ಕೆರಯನ್ನು ಕಟ್ಟಲಾಯಿತು. ಇದು ಭಾರತರತ್ನ, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕಲ್ಪನೆಯ ಕೂಸು. ಅವರ ಕೆರೆ ಅಭಿವೃದ್ಧಿ ಯೋಜನೆಯ ಫಲವಾಗಿ ಹೂಬಳ್ಳಿಯವರಿಗೆ ದೊರಕಿದ ಕೆರೆ ಉಣಕಲ್ ಕೆರೆ.

"ನೀರು ಕೊಡಲ್ಯಾಕೆ ನಾನ್ಯಾರೋ..ನೀನ್ಯಾರೋಹೋಗಯ್ಯಾ ಹರಿಯೋ ಹೊಳೆಗಾಗಿ//

ಹರಿಯೋ ನೀರ್ ಹಚ್ಚಗೆ..ಕೆರೆಯ

ನೀರ್ ಬೆಚ್ಚಗೆನೀ ಕೊಟ್ಟ ನೀರು ಸಮರುಚಿ"//

ಎಂದು ನಮ್ಮ ಜಾನಪದ ಕವಿಗಳು ಹಾಡಿದಂತೆ ೧೮೯೩ರ ನಂತರ ಈ ಕೆರೆಯ ನೀರನ್ನು ಇಡೀ ಹುಬ್ಬಳ್ಳಿ ಮಹಾನಗರಕ್ಕೆ ಕುಡಿಯುವ ನೀರಾಗಿ ಪೂರೈಕೆ ಮಾಡಲಾಗುತ್ತಿತ್ತು. ಆಗಿನಿಂದ ಮಹಾನಗರಕ್ಕೆ ಕುಡಿಯುವ ನೀರಿನ ಅಭಾವ ಇರಲಿಲ್ಲ. ಆದರೆ ಹೂಬಳ್ಳಿ ವಾಣಿಜ್ಯ ನಗರಿಯಾಗಿ ಭರ್ಜರಿ ಬೆಳೆಯಿತು. ಅಂದಿನಿಂದ ಸೂಕ್ಷ್ಮವಾಗಿ ಈ ಕೆರೆಗೆ ಸರ್ಜರಿ ಆರಂಭವಾಯಿತು. ಪರಿಣಾಮವಾಗಿ ೧೦೪ ವರ್ಷಗಳು ಸತತವಾಗಿ ಹುಬ್ಬಳ್ಳಿಗರ ದಾಹ ತೀರಿಸಿದ ಕೆರೆ ೧೯೯೭ ರಲ್ಲಿ ತನ್ನ ಅನುಪಮ ಸೇವೆಯಿಂದ ನಿವೃತ್ತಿ ಹೊಂದಿತು.

ಈ ಉಣಕಲ್ ಕೆರೆಯ ಒಟ್ಟು ವಿಸ್ತೀರ್ಣ ಒಟ್ಟು ೨೫೦ ಎಕರೆಗಳು. ಕೆರೆಯ ಪಾತಳಿ ೯೦ ಮೀಟರ್ ಉದ್ದವಾಗಿದೆ. ೧ ಕಿ.ಮೀ ಉದ್ದದ ಕಟ್ಟೆಯನ್ನು ಸಹ ತಡೆಗೋಡೆಯಾಗಿ ನಿರ್ಮಿಸಲಾಗಿದೆ. ೮೦ ಘನ ಚದುರ ಅಡಿಗಳ ಒಡಲು ಹೊಂದಿದೆ. ಗೋಕುಲ ರಸ್ತೆ ಮತ್ತು ರಾಯಾಪುರ ಮಾರ್ಗವಾಗಿ ಕಾಲುವೆಗಳ ಮೂಲಕ ಇಲ್ಲಿಗೆ ನೀರು ಹರಿದು ಬರುತ್ತದೆ. ಕ್ಯಾಚ್ ಮೆಂಟ್ ಪ್ರದೇಶ ವ್ಯಾಪ್ತಿ ಸುಮಾರು ೨೦ ಕಿ.ಮೀ. ಇದೆ ಎಂದರೆ ನಾಡು ಕಂಡ ಪ್ರತಿಭಾಶಾಲಿ ಇಂಜಿನೀಯರ್ ವಿಶ್ವೇಶ್ವರಯ್ಯನವರ ದೂರದೃಷ್ಟಿ ನಮಗೆ ಅರ್ಥವಾಗಬಹುದು.

ಆದರೆ ಕೆರೆಯ ಸ್ಥಿತಿ ಇಂದು ಶೋಚನೀಯ. ಕೆರೆ ತನ್ನ ನಾಲ್ಕೂ ಮೂಲೆಗಳಿಂದ ಈಗ ಮಲೀನಗೊಳ್ಳುತ್ತಿದೆ. ಕೆರೆಯ ಸುತ್ತ ಹಾಗೆಯೇ ವೀಕ್ಷಣೆ ಮಾಡಿದರೆ ನಮಗೆ ಮಾಲಿನ್ಯದ ನೈಜ ಚಿತ್ರಣ ಕಣ್ಣಿಗೆ ರಾಚುತ್ತದೆ. ಕೆರೆಯ ಸುತ್ತಲೂ ಬಿದ್ದ ಸಿಮೆಂಟ್ ತುಂಬಲು ಬಳಸುವ ಪಾಲಿಥಿನ್ ಚೀಲಗಳು, ರಾಶಿ ಪ್ರಮಾಣದಲ್ಲಿ ತೇಲುತ್ತಿರುವ ಭಕ್ತ ಮಹಾಶಯರ ಹರಕೆಯ ಪಳೆಯುಳಿಕೆಗಳು! ಪ್ಲಾಸ್ತಿಕ್ ತ್ಯಾಜ್ಯ ತೇಲಾಡುವುದನ್ನು ನಾವು ಕಾಣುತ್ತೇವೆ. ಕೆರೆಗೆ ಹೊಂದಿಕೊಂಡಂತೆ ಪಂಚತಾರಾ ಶ್ರೇಣಿಯ ಹೊಟೇಲ್ ಇದೆ. ಅದು ಹೊರ ಹಾಕುವ ಮಾಲಿನ್ಯ ಕೂಡ ಪಂಚತಾರಾಶ್ರೇಣಿಯದ್ದೇ! ಹಾಗೆಯೇ ಸುತ್ತಮುತ್ತಲೂ ಇರುವ ವಾಹನಗಳ ಶೋ ರೂಮ್, ಸರ್ವಿಸ್ ಸೆಂಟರ್ ಗಳಿಂದ ಗಟಾರುಗಳ ಮೂಲಕ ಹರಿದು ಬರುವ ಅಣ್ಣೆ, ಗ್ರೀಸ್ ನಂತಹ ತ್ಯಾಜ್ಯ ಕೆರೆಯ ಜೀವಿ ವೈವಿಧ್ಯಕ್ಕೆ ಮರಣ ಮೃದಂಗ ಬಾರಿಸುತ್ತಿದೆ. ಕೆಲವರು ತಮ್ಮ ರಿಕ್ಷಾ, ಜೀಪ್, ಟ್ರ್ಯಾಕ್ಟರ್, ಕಾರು, ಲಾರಿ ಮೊದಲಾದ ವಾಹನಗಳನ್ನು ನೇರವಾಗಿ ನೀರಿಗಳಿಸಿ ಸ್ನಾನ ಮಾಡಿಸುತ್ತಾರೆ! ಸುತ್ತಮುತ್ತಲಿನ ನಿವಾಸಿಗಳ ಕೊಡುಗೆಯೂ ಅನುಪಮವಾದದದ್ದೇ! ತಮ್ಮ ಮನೆಗಳ ಮುಂದಿನ ಗಟಾರುಗಳನ್ನು ಕೆರೆಯ ಕ್ಯಾಚ್ ಮೆಂಟ್ ವ್ಯಾಪ್ತಿಗೆ ಸೇರಿಸಿ ನಿತ್ಯವೂ ಕೈತೊಳೆದುಕೊಳ್ಳುತ್ತಿದ್ದಾರೆ.

ಕೆಟ್ಟ ಮೇಲೆ ಬುದ್ಧಿ ಬಂತು..ನಮ್ಮ ಪಾಲಿಕೆಗೆ!
ಇತ್ತೀಚೆಗೆ ಅವಳಿ ನಗರ ಪಾಲಿಕೆ ಉಣಕಲ್ ಕೆರೆಯ ಶುದ್ಧೀಕರಣ ಮತ್ತು ಸಮರ್ಪಕ ನಿರ್ವಹಣೆಗೆ ಹತ್ತು ಕೋಟಿ ರುಪಾಯಿಗಳ ಯೋಜನೆ ರೂಪಿಸಿದೆ. ಕೆರೆಗೆ ಸೇರುತ್ತಿರುವ ವಿಷಯುಕ್ತ ನೀರನ್ನು ತಡೆಯಲಾಗುವುದು ಎನ್ನುತ್ತಾರೆ ವಲಯದ ಉಪ ಆಯುಕ್ತ ಎಸ್.ಎನ್.ಗಣಾಚಾರಿ. ಪ್ರಕೃತಿದತ್ತವಾಗಿರುವ ನೀರಿನ ಮೂಲಗಳನ್ನು ಬರಿದು ಮಾಡಿ, ಬರವನ್ನು ಸೃಷ್ಠಿಸಿಕೊಂಡಿದ್ದೇವೆ. ಅಂದರೆ ಒಂದು ಲೀಟರ್ ನೀರಿನ ಹಿತ-ಮಿತ ಬಳಕೆ ಅಥವಾ ಉಳಿಕೆ ೨ ಲೀಟರ್ ನೀರಿನ ಉಳಿತಾಯಕ್ಕೆ ಸಮ ಎಂಬ ಸರಳ ಸೂತ್ರ ಅರ್ಥವಾಗಿಲ್ಲ. ನಾವೆಲ್ಲ ಜಲಯೋಧರಾಗಲು ಇದು ಸಕಾಲ. ಇಲ್ಲದೇ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು.

ಪ್ರಭಾಕರ ಎಸ್. ಚಂದ್ರಪ್ಪನವರ್
ಎಂ.ಎ.ಜೆ.ಎಂ. ೧ ಸೆಮ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

ಕಸ ಮತ್ತು ರಸದೊಂದಿಗೆ ಕೀರ್ತಿ ಪೇಪರ್ಸ ಸರಸ.

Saturday, February 21, 2009

ಕೀರ್ತಿ ಪೇಪರ್ಸ್ ಪ್ರೈವೆಟ್ ಲಿಮಿಟೆಡ್ ಒಂದರ್ಥದಲ್ಲಿ ಹುಬ್ಬಳ್ಳಿಗರಿಗೆ ಹಿತ್ತಿಲ ಗಿಡ. ನಗರದಿಂದ ೧೨ ಕಿ.ಮೀ. ದೂರದಲ್ಲಿ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಈ ಸಣ್ಣ ಕೈಗಾರಿಕೆ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸ್ನೇಹಿಯಾದ, ಕೈಯಿಂದ ತಯಾರಿಸಲ್ಪಡುವ ಹಾಗು ದೇಶ-ವಿದೇಶಗಳಿಗೆ ರಫ್ತಾಗುವ ಹಾಳೆ ತಯಾರಿಸುವ ಕೈಗಾರಿಕೆ ಅದು.

ಕೀರ್ತಿ ಪೇಪರ್ಸ್ ತನ್ನ ವ್ಯವಸಾಯದ ತ್ಯಾಜ್ಯ ಹಾಗು ಬಳಸಿದ ನೀರಿನ ವ್ಯವಸ್ಥಿತ ಪ್ರಬಂಧನೆಯಿಂದ ಗಮನ ಸೆಳೆದಿದೆ. ಜೊತೆಗೆ ಒಳ್ಳೆಯ ಗುಣಮಟ್ಟದ ಪೇಪರ್, ಕೈ ಚೀಲಗಳು,ಕಡತಗಳು, ಶುಭಾಶಯ ಪತ್ರಗಳು, ಪಾರ್ಸಲ್ ಲಕೋಟೆಗಳು ಸೇರಿದಂತೆ ಅನೇಕ ಗಮನ ಸೆಳೆಯುವ ಹಾಳೆಯ ವಸ್ತುಗಳನ್ನು ತಯಾರಿಸಿ, ವಿದೇಶಕ್ಕೆ ರಫ್ತು ಮಾಡುವ ಕಾರ್ಯದಲ್ಲಿ ನಿರತವಾಗಿದೆ.

೧೯೯೨ರಲ್ಲಿ ಕೇರಳ ಮೂಲದ ವಾಸುದೇವನ್ ಹಾಗು ಅವರ ಸಹೋದರರು ರೋಗಗ್ರಸ್ಥವಾಗಿದ್ದ ಈ ಕೈಗಾರಿಕೆಯನ್ನು ಕೊಂಡರು. ನಂತರ ಅಹರ್ನಿಶಿ ದುಡಿದು ನಷ್ಟದಲ್ಲಿದ್ದ ಕಂಪನಿ ಲಾಭದತ್ತ ಹೊರಳುವಂತೆ ಮಾಡಿದರು. ಸಾಕಷ್ಟು ಸವಾಲುಗಳನ್ನು ದೈಹಿಕವಾಗಿ ಹಾಗು ಮಾನಸಿಕವಾಗಿ ಎದುರಿಸಿದ ವಾಸುದೇವನ್ ಇಂದಿಗೆ ೪೫ಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ೧೯೯೫ರಲ್ಲಿ ಪೂರ್ಣಪ್ರಮಾಣದ ವ್ಯವಹಾರಕ್ಕೆ ಧುಮುಕಿದ ಕೀರ್ತಿ ಪೇಪರ್ಸ್, ನಿತ್ಯ ಪರಿಸರ ಸ್ನೇಹಿ ಕಾಗದ ತಯಾರಿಸಲು ಬಳಸುವ ನೀರಿನ ಪ್ರಮಾಣ ೨ ಸಾವಿರದಿಂದ ೩ ಸಾವಿರ ಲೀಟರ್. ಇಷ್ಟು ನೀರು ಬಳಸಿ ೨೩ x ೩೩ ಇಂಚುಗಳ ೮ ಸಾವಿರ ಕಾಗದಗಳನ್ನು ಉತ್ಪಾದಿಸಲಾಗುತ್ತದೆ. ಜೊತೆಗೆ ಹತ್ತಿರದಲ್ಲಿಯೇ ಇರುವ ಖಾದಿ ವಿಭಾಗದಲ್ಲಿಯೂ ಈ ಪ್ರಮಾಣದಲ್ಲಿಯೇ ನೀರು ಬಳಸಿ ಕಾಗದ ತಯಾರಿಸಲಾಗುತ್ತದೆ.

ಇನ್ನು ಬಳಸಿದ ನೀರನ್ನು ಶುದ್ಧೀಕರಿಸಿ ಕೈಗಾರಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ತೋಟಕ್ಕೆ ಬಿಟ್ಟುಕೊಳ್ಳಲಾಗುತ್ತದೆ. ಒಟ್ಟಾರೆ ಕಾಗದ ತಯಾರಿಕೆಯ ೮ ಹಂತಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಬಳಕೆಯಾಗುತ್ತದೆ. ಆದರೆ ಹಿತ-ಮಿತವಾದ ಜೊತೆಗೆ ನೀರು ದುರ್ಬಳಕೆಯಾಗದಂತೆ ವ್ಯವಸ್ಥೆ ರೂಪಿಸಲಾಗಿದೆ. ಬಳಸಿದ ನೀರಿನ ಶುದ್ಧೀಕರಣ, ಪುನರ್ಬಳಕೆಗೆ ಸಹ ಇಲ್ಲಿ ಅವಕಾಶವಿದೆ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ವಾಸುದೇವನ್.

ಪ್ರಾಯೋಗಿಕವಾಗಿ ಚಿಂತಿಸುವುದಾದರೆ ಯಾವುದೇ ಕಾಗದ ತಯಾರಿಕೆ ಕಾರ್ಖಾನೆ ಇರಲಿ ಗಬ್ಬು ನಾತ ಹಾಗು ೪ ರಿಂದ ೬ ರೀತಿಯ ರಾಸಾಯನಿಕಗಳ ಬಳಕೆ ಇರಲೇ ಬೇಕು. ಬಹುತೇಕ ಕಡೆಗಳಲ್ಲಿ ಈ ಕಾಗದ ಕಾರ್ಖಾನೆಗಳನ್ನು ನದಿಗಳ ಪಕ್ಕದಲ್ಲಿಯೇ ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ. ದೈತ್ಯ ಬಕಾಸುರನ ಹೊಟ್ಟೆಯ ಈ ಕಾರ್ಖಾನೆಗಳು ನೀರು ಕುಡಿಯುವುದು ಹಾಗೆಯೇ..ಮತ್ತೆ ಕಲುಷಿತ ಗೊಳಿಸಿ ಹೊರ ಬಿಡುವುದು ಸಹ ಅದೇ ಪ್ರಮಾಣದಲ್ಲಿ. ದಾಂಡೇಲಿಯ ಪೇಪರ್ ಮಿಲ್ ಕಾಳಿ ನದಿಯನ್ನು ಕಲುಷಿತ ಗೊಳಿಸಿದ ಬಗೆ ನಮ್ಮ ಜಂಘಾಬಲವನ್ನೇ ಉಡುಗಿಸುತ್ತದೆ. ಆದರೆ ಕೀರ್ತಿ ಪೇಪರ್ಸ್ ಈ ಬೆಳವಣಿಗೆಗಳಿಗೆ ಅಪವಾದ.ಹಾಗೆಯೇ ಬಳಸಿದ ನೀರನ್ನು ಕೊಂಚ ಮಟ್ಟಿಗೆ ಶುದ್ಧೀಕರಿಸಿ, ಸಮೀಪದ ಕೆರೆ-ಕಾಲುವೆಗಳಿಗೆ ಬಿಟ್ಟ ಉದಾಹರಣೆಗಳು ಕಡಿಮೆ ಏನಿಲ್ಲ. ಕೀರ್ತಿ ಪೇಪರ್ಸ್ ಕಾಗದ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸದೇ, ನೈಸರ್ಗಿಕ ಬಣ್ಣ, ಹೂವು, ಎಲೆ, ಗರಕಿ ಹುಲ್ಲಿ ಮೊದಲಾದವನ್ನು ಬಳಸಿ ಆದಷ್ಟು ತನ್ನ ಉತ್ಪನ್ನ ಪರಿಸರ ಸ್ನೇಹಿಯಾಗಿಡಲು ಪ್ರಯತ್ನಿಸುತ್ತದೆ.

ಕಾಗದ ತಯಾರಿಕೆಯಲ್ಲಿ ಹತ್ತಿ ಬಟ್ಟೆಯನ್ನು ಬಳಸಲಾಗುತ್ತದೆ. ತಮಿಳುನಾಡಿನ ತ್ರಿಚೂರ್ ನಿಂದ ಸಿದ್ಧ ಉಡುಪುಗಳ ತಯಾರಿಕೆಯ ಕಂಪನಿಗಳು ಬಳಸಿ, ತ್ಯಾಜ್ಯವೆಂದು ಬಿಸುಟ ಹತ್ತಿ ತುಣುಕನ್ನು ಕಾಗದ ತಯಾರಿಕೆಯಲ್ಲಿ ಕೀರ್ತಿ ಪೇಪರ್ಸ್ ಬಳಸುತ್ತದೆ. ಈ ಎಲ್ಲ ಹತ್ತಿ ಬಟ್ಟೆಗಳ ತ್ಯಾಜ್ಯವನ್ನು ಜೋಡಿಸಿ ಇಲಾಸ್ಟಿಕ್ ಮತ್ತು ಸಿಂಥೆಟಿಕ್ ತುಣುಕುಗಳನ್ನು ಹೊರತೆಗೆದು, ಚಾಪರ್ ಮಷೀನ್ ಮೂಲಕ ಎಲ್ಲ ಕಚ್ಚವಸ್ತುವನ್ನು ೧ ಸ್ಕ್ವೇರ್ ಇಂಚ್ ಕತ್ತರಿಸಿ ನೀರಿನಲ್ಲಿ ಹಾಕಲಾಗುತ್ತದೆ. ಅದಕ್ಕೆ 'ರೋಜರ್ ಅಲಂ' ಬೆರೆಸಿ ಬೇಕಾದ ಬಣ್ಣ ಪಡೆಯಲು ಬೀಟರ್ ಮಶೀನ್ ಗೆ ಈ ಸ್ಲರಿ ಸುರಿಯಲಾಗುತ್ತದೆ. ಆನಂತರ ಕಾಗದ ರೂಲ್ಗಳನ್ನು ಹೊರತೆಗೆದು ದೊಡ್ಡತೊಟ್ಟಿಗಳಲ್ಲಿ ಕಲಸಿ, ಮರದ ಚೌಕಟ್ಟಿನಲ್ಲಿ ಹಾಕಲಾಗುತ್ತದೆ. ನಂತರ ಬಟ್ಟೆಯ ಮೇಲೆ ಈ ಫ್ರೇಮ್ ಹಾಕಿ ಎತ್ತುತ್ತಿದ್ದಂತೆಯೇ ಒದ್ದೆಯಾದ ಕಾಗದ ಸಿದ್ಧಗೊಳ್ಳುತ್ತದೆ.
ನಂತರ ಹೈಡ್ರೋಲಿಕ್ ಒತ್ತು ಯಂತ್ರಗಳ ಸಹಾಯದಿಂದ ಬಟ್ಟೆಯಲ್ಲಿ ಹುದುಗಿರುವ ನೀರನ್ನು ಹೊರ ಚಿಮ್ಮಿಸಲಾಗುತ್ತದೆ. ಬಟ್ಟೆ ಒಣಗಿದಂತಾಗಿ ಕೇವಲ ತೇವಾಂಶ ಮಾತ್ರ ಹೊಂದಿ, ಕಾಗದ ಒಂದು ಆಕಾರ ಪಡೆದುಕೊಳ್ಳಲು ಮೊದಲು ಮಾಡುತ್ತದೆ. ನಂತರ ತುಸು ಒಣಗಿದ ನಂತರ ಸಿಲಿಂಡರ್ ಆಕೃತಿಯ ಮೌಲ್ಡ್ ಬಳಸಿ ಹಾಳೆಯನ್ನು ನಯವಾಗಿಸಲಾಗುತ್ತದೆ. ಆನಂತರ ಕಾಗದಗಳನ್ನು ಅಳತೆಗೆ ಅನುಸಾರವಾಗಿ ದಂಡೆಗಳನ್ನು ಕತ್ತರಿಸಿ ಅಂತಿಮ ರೂಪ ಕೊಡಲಾಗುತ್ತದೆ. ಈ ಎಲ್ಲ ಹಂತದಲ್ಲಿಯೂ ನೀರಿನ ಬಳಕೆ ಅತ್ಯಂತ ನ್ಯಾಯಯುತ ರೀತಿಯಲ್ಲಿ ನಡೆಯುತ್ತದೆ. ಯಾವ ಕಾರ್ಮಿಕ ಕೂಡ ಹದ್ದು ಮೀರಿ ನೀರಿನ ದುಂಡುವೆಚ್ಚ ಮಾಡುವುದಿಲ್ಲ ಎನ್ನುವುದು ಅವರ ಜಲ ಪ್ರತಿ ಕಾಳಜಿ ಎತ್ತಿ ತೋರಿಸುತ್ತದೆ.
ಹೀಗೆಯೇ ಎಲ್ಲ ಕೈಗಾರಿಕೆಗಳು ಪರಿಸರ ಸ್ನೇಹಿಯಾಗಿ ಚಿಂತಿಸಿದರೆ..ಎಷ್ಟು ಅನುಕೂಲವಲ್ಲವೇ?
ಶ್ರೀನಿವಾಸ ರೆಡ್ಡಿ
ಪಿ.ಜಿ.ಡಿ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯

ಜಡೆಯಲ್ಲಿ ಜಿನುಗುವ ಗಂಗೆ

ಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ನನ್ನಲ್ಲಿ ವಿಶೇಷ ಜಿಜ್ಞಾಸೆ ಮೂಡಿಸಿದೆ.

ಕಾಲಕಾಲೇಶ್ವರ ಗ್ರಾಮದ ತಪ್ಪಲಿನಲ್ಲಿರುವ ಕಾಲಕಾಲೇಶ್ವರ ಬೆಟ್ಟದಲ್ಲಿ ಶ್ರೀ ಕಾಲಕಾಲೇಶ್ವರನ ಸನ್ನಿಧಾನವಿದೆ. ಇಲ್ಲಿ ಶಿವನ ಜಡೆಗಳು ಜೋತು ಬಿದ್ದಂತೆ ಆಲ ಮತ್ತು ಅರಳೆ ಬೇರುಗಳಿಂದ ಗಂಗೆಯ ಅವತರಣವಾದಂತೆ ನೀರು ಜಿನುಗುತ್ತದೆ. ಈ ಬೇರುಗಳ ಮುಖಾಂತರ ಬೀಳುತ್ತಿರುವ ನೀರನ್ನು ನೋಡಿದಾಗ ಸಾಕ್ಷಾತ್ ಗಂಗೆಯೇ ಶಿವನ ಜಡೆಯಿಂದ ಉಕ್ಕಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ಈ ಹಸಿರು ಸೊಬಗಿನ ಬೆಟ್ಟಕ್ಕೆ ಭೇಟಿ ನೀಡುವ ಆಸ್ತಿಕರಿಗೆ ವಿಶೇಷ ಅನುಭವ ನೀಡುತ್ತದೆ. ಮೇಲ್ಭಾಗದ ಪಡಿಯಿಂದ ಬೀಳುವ ತುಂತುರು ನೀರ ಹನಿಗಳು ನೋಡುಗರ ಮುಖಕ್ಕೆ ಮುತ್ತಿಟ್ಟು ಮಾಯವಾಗುತ್ತವೆ.

ನಿಸರ್ಗ ಪ್ರೇಮಿಗಳಿಗೆ ಸ್ವರ್ಗ ಸುಖ ನೀಡುವ ಮನೋರಂಜನೀಯವಾದ ಈ ಗಂಗೆ ಗುಪ್ತಗಾಮಿನಿಯಾಗಿ ಕಾಲಕಾಲೇಶ್ವರ ಕ್ಷೇತ್ರದ ಹಿರಿಮೆಗೆ ತನ್ನ ಕೊಡುಗೆ ನೀಡುತ್ತಿದ್ದಾಳೆ. ಬೆಟ್ಟದ ಮೇಲೆ ಕೆರೆ ಭಾವಿಗಳೇನೂ ಇಲ್ಲ. ಆದರೂ ವರ್ಷದ ೧೨ ತಿಂಗಳೂ ಸದಾ ಬೆಟ್ಟದ ಮೇಲಿಂದ ನೀರು ಜಿನುಗುತ್ತಲೇ ಇರುತ್ತದೆ. ಈ ನೀರು ಎಲ್ಲಿಂದ ಬರುತ್ತದೆಯೋ ಅದು ಜಿಜ್ಞಾಸೆಯ ವಿಷಯ. ಮಳೆಗಾಲದಲ್ಲಿ ಈ ನೀರು ರಭಸವಾಗಿ ಬೀಳುತ್ತದೆ. ಬೇಸಿಗೆಯಲ್ಲಿ ಈ ಜಲಧಾರೆ ತುಂತುರು ನೀರ ಹನಿಗಳಾಗಿ ಪರಿವರ್ತಿತಗೊಳ್ಳುತ್ತವೆ. ಈ ಸೃಷ್ಟಿ ಸೊಬಗಿನ ನಾಡಿನಲ್ಲಿ ಈ ಗಂಗೆ ಸಣ್ಣ ಜಲಪಾತದಂತೆ ಮನ ಸೆಳೆಯುತ್ತಾಳೆ. ಬೆಟ್ಟದ ಶಿಖರದಲ್ಲಿ ಪಾರಿವಾಳಗಳ ಸಂಕುಲ ಸಹ ಈ ಸೊಬಗನ್ನು ಇಮ್ಮಡಿಸುವಂತೆ ಮಾಡಿದೆ.
ಶ್ರೀ ಕಾಲಕಾಲೇಶ್ವರ ದೇವಸ್ಥಾನದ ಪೂಜಾರಿ ಮಲ್ಲಯ್ಯಸ್ವಾಮಿ ಅವರು ಹೇಳುವಂತೆ, ದೇವಸ್ಥಾನದ ಎಡ ಭಾಗದಲ್ಲಿ ೭ ಗವಿಗಳಿದ್ದು, ಆ ಗವಿಗಳಲ್ಲಿ ೭ ಹೊಂಡಗಳಿವೆ. ಆ ಎಲ್ಲ ಹೊಂಡಗಳ ತುಂಬ ನೀರು ೧೨ ತಿಂಗಳುಗಳ ಕಾಲ ತುಂಬಿರುತ್ತದೆ. ಮೊದಲ ಹೊಂಡ ಹೊರತು ಪಡಿಸಿ ಉಳಿದ ೬ ಹೊಂಡಗಳನ್ನು ಒಳಹೊಕ್ಕು ನೋಡಲು ಸಾಧ್ಯವಿಲ್ಲ. ಕಳಕೇಶ ಚಿಲಝರಿ ಅವರು ಅಭಿಪ್ರಾಯ ಪಡುವಂತೆ, ದೇವಸ್ಥಾನದ ಕೆಳಗಿಳಿದು ಬಂದರೆ ೫ ಹೊಂಡಗಳು ಕಾಣಸಿಗುತ್ತವೆ. ಈ ೫ ಹೊಂಡಗಳು ವರ್ಷದ ೧೨ ತಿಂಗಳುಗಳ ಕಾಲ ತುಂಬಿ ಹರಿಯುವ ಹೊಂಡಗಳು.
ಸಾಮಾನ್ಯವಾಗಿ ಗ್ರಾಮ ಎಂದರೆ ಸಾಕು. ಅಲ್ಲಿನ ನೀರಿನ ಬವಣೆಯನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಾಲಕಾಲೇಶ್ವರ ಗ್ರಾಮ ಬರ ಕಾಣದ ಗ್ರಾಮ. ಇಲ್ಲಿ ಗಂಗಾಧರ ಹಳ್ಳ ಮತ್ತು ಕಣಿವೆ ಹಳ್ಳಗಳು ಮೈದುಂಬಿ ಹರಿಯುತ್ತವೆ. ಹಾಗೆಯೇ ಈ ೫ ಹೊಂಡಗಳು ಇರುವುದರಿಂದ ಒಂದು ಹೊಂಡ ದೇವರ ಪೂಜೆಗೆ ಮೀಸಲಿದ್ದರೆ, ೨ನೇ ಹೊಂಡದ ನೀರು ಕುಡಿಯಲು, ೩ನೇ ಹೊಂಡದ ನೀರು ಸ್ನಾನ ಮಾಡಲು, ೪ನೇ ಹೊಂಡದ ನೀರು ಬಟ್ಟೆ ತೊಳೆಯಲು ಹೀಗೆ ಪ್ರತ್ಯೇಕವಾಗಿ ಭಕ್ತಾದಿಗಳು ನೀರನ್ನು ಉಪಯೋಗಿಸುತ್ತಾರೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಬೆಟ್ಟದಿಂದ ಧುಮುಕುವ ೨೦ಕ್ಕೂ ಹೆಚ್ಚು ನಯನ ಮನೋಹರ ಜಲಪಾತಗಳನ್ನು ನೋಡಿ ಆನಂದಿಸಬಹುದು.
ಗಜೇಂದ್ರಗಡದ ಎಸ್.ಎಂ.ಭೂಮರೆಡ್ಡಿ ಕಾಲೇಜಿನಲ್ಲಿ ನಾವೆಲ್ಲ ಪದವಿ ವಿದ್ಯಾರ್ಥಿಗಳಾಗಿದ್ದ ಮೇಲಿಂದ ಮೇಲೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೆವು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿ ಸಾಕಷ್ಟು ಬಾರಿ ಈ ಎಲ್ಲ ಹೊಂಡಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಇತ್ತೀಚೆಗೆ ನಾನು ಭೇಟಿ ನೀಡಿದ್ದಾಗ ಹೊಂಡಗಳೆಲ್ಲ ಕಳೆಗುಂದಿ ಕೊಚ್ಚೆಯ ಗುಂಡಿಗಳಂತಾಗಿದ್ದವು. ಈ ಬಾರಿ ಸೂಟಿಯಲ್ಲಿ ಊರಿಗೆ ಹೋದಾಗ ಸಮಾನಮನಸ್ಕ ಗೆಳೆಯರೆಲ್ಲ ಜೊತೆಗೂಡಿ ಮತ್ತೆ ಅವುಗಳನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದ್ದೇವೆ.
ನೀವು ಈ ಕ್ಶೇತ್ರಕ್ಕೆ ಭೇಟಿ ನೀಡಬೇಕೆ? ಹುಬ್ಬಳ್ಳಿಯಿಂದ ೫೨ ಕಿ.ಮೀ ದೂರದಲ್ಲಿದೆ ಗದಗ. ಅಲ್ಲಿಂದ ಗಜೇಂದ್ರಗಡ ೫೬ ಕಿ.ಮೀ. ಇಲ್ಲಿಂದ ಕೇವಲ ೪ ಕಿ.ಮೀ ದೂರದಲ್ಲಿದೆ ಶ್ರೀ. ಕಾಲಕಾಲೇಶ್ವರ ದೇವಸ್ಥಾನ. ಇಲ್ಲಿಗೆ ಬಸ್, ಟ್ಯಾಕ್ಸಿ ಮತ್ತು ಆಟೊ, ಟಾಂಗಾಗಳ ಮೂಲಕ ತೆರಳಬಹುದು. ಇಲ್ಲಿ ಯಾವುದೇ ಹೊಟೆಲ್ ಅಥವಾ ಪ್ರವಾಸಿ ಮಂದಿರಗಳು ಇಲ್ಲದ ಕಾರಣ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕು.
ತಿಪ್ಪಣ್ಣ ಅವಧೂತ
ಎಂ.ಎ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್.ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ -೨೯

ಪೂರಕ ಇಂಧನವಾಗಿ ಮಾನವ ತ್ಯಾಜ್ಯ

"ಕಣ್ಣು ಕಪ್ಪೆ ಚಿಪ್ಪಿನಗಲದ ದೋಣಿ; ನೋಟ ಸಮುದ್ರದಂತಹ ಪ್ರಾಣಿ" ಒಲುಮೆಯ ಕವಿ ಕೆ.ಎಸ್.ನರಸಿಂಹಸ್ವಾಮಿಗಳ ಮಾತು ಡಾ. ಉಮೇಶ ನಾಗಲೋಟಿಮಠ ಅವರಿಗೆ ಅಕ್ಷರಶ: ಅನ್ವಯಿಸುತ್ತದೆ. ಕಾರಣ,
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ, ಇಡಿ ಆಸ್ಪತ್ರೆಗೆ ಇಂಧನ ಮೂಲವಾಗಿ ಬಳಸಿದ ಹೆಗ್ಗಳಿಕೆ ಹುಬ್ಬಳ್ಳಿಯ ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ದ್ದು. ಆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮೇಶ ನಾಗಲೋಟಿಮಠ. ಅವರು ಖ್ಯಾತ ರೋಗ ನಿದಾನ ಶಾಸ್ತ್ರಜ್ಞರಾಗಿದ್ದ ದಿ. ಡಾ.ಸ.ಜ.ನಾಗಲೋಟಿಮಠ ಅವರ ಪುತ್ರ.
ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಲ್ಲಿ ಕಿವಿ, ಗಂಟಲು ಹಾಗು ಮೂಗು ಶಸ್ತ್ರ ಚಿಕಿತ್ಸಾ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ

ಡಾ.ಉಮೇಶ ಅವರ ಸಂದರ್ಶನದ ಆಯ್ದಭಾಗ.
ಶ್ರೀನಿವಾಸ:
ತಮಗೆ ಮೊಟ್ಟ ಮೊದಲಿಗೆ ಜೈವಿಕ ಅನಿಲ ಉತ್ಪಾದನೆ ಹಾಗು ಬಳಕೆಯ ಕುರಿತು ಯೋಚನೆ ಮೂಡಿದ್ದು ಹೇಗೆ?ಡಾ.ಉಮೇಶ: ನಾನು ಮೊದಲಿಗೆ ಸುಧಾ ವಾರಪತ್ರಿಕೆಯಲ್ಲಿ ಜೈವಿಕ ಅನಿಲ ಉತ್ಪಾದನೆಯ ಕುರಿತಾದ ನುಡಿಚಿತ್ರ ಓದಿದ್ದೆ. ಅದರಿಂದ ಒಂದು ಯೋಚನೆ ಮನಸ್ಸಿನಲ್ಲಿ ಮೂಡಿತು. ಆನಂತರ ಜೈವಿಕ ಅನಿಲದ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ತಿಳಿದುಕೊಂಡೆ. ಇದೆ ಸಂದರ್ಭದಲ್ಲಿ ಶಿಗ್ಲಿಯ ಸ್ವಾಮೀಜಿಯೊಬ್ಬರು ೫೦ ವರ್ಷಗಳ ಹಿಂದೆಯೇ ಜೈವಿಕ ಅನಿಲ ಉತ್ಪಾದನೆ ಸಾಹಸ ಕೈಗೊಂಡಿದ್ದರು. ಇದರಿಂದ ಯೋಚನೆ ಬಲಗೊಂಡಿತು.



ಶ್ರೀನಿವಾಸ: ಜೈವಿಕ ಅನಿಲ ಉತ್ಪಾದನೆ ಆರಂಭಿಸಿದಾಗ ನೀವು ಎದುರಿಸಿದ ಸವಾಲುಗಳೇನು?
ಡಾ.ಉಮೇಶ: ಮೊದಲಿಗೆ ನನ್ನ ಆಸ್ಪತ್ರೆಯ ಎಲ್ಲ ವೈದ್ಯರು ಇದರಿಂದ ಆಸ್ಪತ್ರೆಯ ವಾತಾವರಣ ಹದಗೆಡುತ್ತದೆ. ಅಲ್ಲದೇ ನಿರ್ವಹಣೆ ತೊಂದರೆದಾಯಕ, ಹಾಗಾಗಿ ಇದು ಬಹಳ ದಿನಗಳ ವರೆಗೆ ಕಾರ್ಯರೂಪದಲ್ಲಿರುವುದು ಕಷ್ಟವಾಗಬಹುದು ಎಂದರು. ಸಮಾಜದ ಭಯದಿಂದ ಹಾಗು ಆಚಾರಣೆ, ವಿಚಾರ, ಮಡಿವಂತಿಕೆಯ ಭಯದಿಂದ ಇದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ನನಗೆ ಮನದಟ್ಟಾಯಿತು. ನಾನು ಕೂಡ ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು. ಆನಂತರ ಶಿರಸಿಯಲ್ಲಿನ ಮನೆಯೊಂದರಲ್ಲಿ ಶೌಚಾಲಯವನ್ನು ಉಪಯೋಗಿಸಿಕೊಂಡು ಜೈವಿಕ ಅನಿಲ ಉತ್ಪಾದಿಸುತ್ತಿರುವುದನ್ನು ಕಂಡು ನನ್ನ ಮನೋಬಲ ವೃದ್ಧಿಸಿತು.


ಶ್ರೀನಿವಾಸ: ಜೈವಿಕ ಅನಿಲ ತಯಾರಿಕೆಗೆ ಬೇಕಾದ ಸಿದ್ಧತೆಗಳು ಯಾವವು?
ಡಾ.ಉಮೇಶ:ಮೊದಲಿಗೆ ಅಂತರ್ಜಾಲ ಜಾಲಾಡಿ. ಅಲ್ಲಿನ ಪ್ರಾಯೋಗಿಕ ಸಿದ್ಧತೆಗಳನ್ನು, ಇಂಜಿನೀಯರ್ ಅವರನ್ನು ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಸಂಪರ್ಕಿಸಿ. ನನ್ನ ಅನುಭವ ಹೇಳುವುದಾದರೆ, ಮಾನವ ತ್ಯಾಜ್ಯದ ಬಯೋ ಗ್ಯಾಸ್ ಪಡೆಯಲು ೨ ತೊಟ್ಟಿಗಳನ್ನು ನಿರ್ಮಿಸಿ, ಅದಕ್ಕೆ ಸೂರ್ಯನ ಕಿರಣಗಳು ಹಾಗು ಆಮ್ಲಜನಕ ಬೀಳದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿ ಕಟ್ಟಿಸುವುದು. ಅದಕ್ಕಾಗಿಯೇ ಇದನ್ನು ಭೂಮಿಯ ಕೆಳಗೆ ಅಳವಡಿಸುವುದು. ಅದಕ್ಕೆ ಶೌಚಾಲಯದ ಮಲ ಹಾಗು ಮೂತ್ರ ಪ್ರತ್ಯೇಕಿಸಿ ಸಂಗ್ರಹಿಸಿ, ಪೈಪ್ ಲೈನ್ ಮೂಲಕ ಈ ತೊಟ್ಟಿಗೆ ಸಂಪರ್ಕ ಕಲ್ಪಿಸುವುದು. ಆನಂತರ ಅಲ್ಲಿ ಸಂಗ್ರಹಗೊಳ್ಳುವ ಗ್ಯಾಸ್ ಬಿಡುಗಡೆ ಮಾಡಲು ವಿಶೇಷ ಪೈಪ್ ವ್ಯವಸ್ಥೆ ಮಾಡಿಕೊಂಡೆವು.


ಶ್ರೀನಿವಾಸ: ಜೈವಿಕ ಅನಿಲ ಉತ್ಪಾದನೆಯ ವಿವಿಧ ಹಂತಗಳ ಬಗ್ಗೆ ತಿಳಿಸಿ.
ಡಾ.ಉಮೇಶ: ನಮ್ಮ ಸುಶ್ರುತ ಆಸ್ಪತ್ರೆಯ ಶೌಚಾಲಯಗಳ ಮೂಲಕ ಮಾನವ ತ್ಯಾಜ್ಯ ಪೈಪ್ ಮೂಲಕ ತಾನಾಗಿಯೇ ಬಂದು, ಸೆಲ್ಲರ್ ನಲ್ಲಿ ನಿರ್ಮಿಸಲಾಗಿರುವ ಬೃಹತ್ ಪ್ರಮಾಣದ ೨ ತೊಟ್ಟಿಗಳಲ್ಲಿ ಸಂಗ್ರಹ ಗೊಳ್ಳುತ್ತದೆ. ಆನಂತರ ಕೆಲ ತಾಸುಗಳ ಬಳಿಕ ತ್ಯಾಜ್ಯವು 'ಆನ್ ಎರೋಬಿಕ್' ರೀತಿಯಲ್ಲಿ ಕರಗಿ, ಮೀಥೇನ್ ಅನಿಲವಾಗಿ ಮೇಲೆ ಬರುತ್ತದೆ. ಹೀಗೆ ಉತ್ಪತ್ತಿಯಾದ ಗ್ಯಾಸ್ ತೊಟ್ಟಿಯ ಮೇಲ್ಭಾಗದಲ್ಲಿ ಅಳವಡಿಸಲಾದ ಕೊಳವೆಗಳ ಮೂಲಕ ಹೊರ ಬರುತ್ತದೆ. ಈ ಕೊಳವೆಗಳನ್ನು ಆಸ್ಪತ್ರೆಯ ಎಲ್ಲ ವಿಭಾಗಗಳ ಒಲೆಗಳಿಗೆ ಜೋಡಿಸಲಾಗಿದೆ. ವಿದ್ಯುತ್ ಕೈಕೊಟ್ಟ ತುರ್ತು ಸಂದರ್ಭಗಳಲ್ಲಿ ಪೆಟ್ರೋಮ್ಯಾಕ್ಸ್ ಗೆ ಜೋಡಿಸಿ ಬೆಳಕನ್ನು ಸಹ ಪಡೆಯಲಾಗುತ್ತಿದೆ.


ಶ್ರೀನಿವಾಸ:ಈ ಪ್ರಯೋಗದಿಂದ ತಮ್ಮ ಆಸ್ಪತ್ರೆ ಭರಿಸುವ ಅಥವಾ ಉಳಿಸುವ ಹಣವೆಷ್ಟು?
ಡಾ.ಉಮೇಶ: ನನಗೆ ಜೈವಿಕ ಅನಿಲ ಉತ್ಪಾದನೆಯ ಪ್ರಕ್ರಿಯೆಯ ೨ ತೊಟ್ಟಿಗಳನ್ನು ನಿರ್ಮಿಸಲು ೬೦ ಸಾವಿರ ರುಪಾಯಿ ಖರ್ಚಾಗಿದೆ. ಹಾಗೆಯೇ ಪೈಪ್ ಲೈನ್ ಅಳವಡಿಸಲು ೧೦ ರಿಂದ ೧೫ ಸಾವಿರ ರುಪಾಯಿ ವೆಚ್ಚ ತಗುಲಿದೆ. ಹೀಗೆ ೨ ವರ್ಷಗಳಿಂದ ನನಗೆ ಖರ್ಚಾದ ಹಣ ಅಂದಾಜು ೭೦ ಸಾವಿರ ರುಪಾಯಿಗಳು. ಈ ಪ್ರಯೋಗ ಅನುಷ್ಠಾನಗೊಳಿಸದೇ ಹೋಗಿದ್ದರೆ ತಿಂಗಳಿಗೆ ೧೫ ರಿಂದ ೨೦ ಸಾವಿರ ರುಪಾಯಿ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತಿತ್ತು. ಅಲ್ಲದೇ ದಿನಕ್ಕೆ ೧೨ ರಿಂದ ೧೪ ತಾಸು ಈ ಗ್ಯಾಸ್ ಬಳಸುತ್ತಿರುವುದರಿಂದ ಇಂಧನದ ಆರ್ಥಿಕ ಹೊರೆ ಆಸ್ಪತೆಯ ಮೇಲಿಲ್ಲ.


ಶ್ರೀನಿವಾಸ: ಜೈವಿಕ ಅನಿಲ ಉತ್ಪಾದನೆಯಲ್ಲಿ ಆಸ್ಪತ್ರೆಯ ತ್ಯಾಜ್ಯವನ್ನು ಸಹ ಈ ಪ್ರಕ್ರಿಯೆಯಲ್ಲಿ ಬಳಸಬಹುದೇ?
ಡಾ.ಉಮೇಶ: ಇಲ್ಲ. ನಾವು ಬಳಸುತ್ತಿರುವುದು ಮಾನವ ತ್ಯಾಜ್ಯ ಮಾತ್ರ. ಇದರಲ್ಲಿ ಎಲ್ಲ ತ್ಯಾಜ್ಯಗಳು ಉದಾಹರಣೆ ಪ್ಲಾಸ್ಟಿಕ್, ಕಾಗದ, ಸಿರೀಂಜ್, ವಾಯರ್ ಮೊದಲಾದವುಗಳನ್ನು ಹಾಕುವುದರಿಂದ ಗ್ಯಾಸ್ ಪೈಪ್ ಮುಚ್ಚಿ ಪೂರೈಕೆ ತಲೆನೋವಾಗುತ್ತದೆ. ಕೆಲವೆಡೆ ಆಕಸ್ಮಾತ್ ಈ ಅನ್ಯ ಪದಾರ್ಥಗಳ ಸೇರ್ಪಡೆಯಿಂದ ಗ್ಯಾಸ್ ಸೋರಿಕೆ ಶುರುವಾಗಿ ಪ್ರಯೋಗ ಹಿನ್ನೆಡೆ ಅನುಭವಿಸುವಂತಾಗಿದೆ. ಹಾಗೆಯೇ ಕೆಲವೇ ತಿಂಗಳುಗಳಲ್ಲಿ ಮತ್ತೆ ಸಾಂಪ್ರದಾಯಿಕ ಇಂಧನಗಳಿಗೆ ನಾವು ಮೊರೆ ಹೋಗಬೇಕು.


ಶ್ರೀನಿವಾಸ:ಮಾನವ ತ್ಯಾಜ್ಯದಿಂದ ತಯಾರಿಸಲಾಗುವ ಗ್ಯಾಸ್ ಬಳಕೆಯ ಕುರಿತಂತೆ ತಾವು ಇತರೆ ಉದ್ಯಮದವರಿಗೆ ಹೇಳಬಯಸುವುದೇನು?
ಡಾ.ಉಮೇಶ: ಇತ್ತೀಚಿನ ದಿನಗಳಲ್ಲಿ ತಾವು ಗಮನಿಸಿರಬಹುದು. ಪೆಟ್ರೋಲ್ ಸೇರಿದಂತೆ ಅನೇಕ ಇಂಧನಗಳ ಬೆಲೆ ಗಗನಕ್ಕೇರಿದೆ. ಆದರೆ ಈ ಜೈವಿಕ ಅನಿಲ ಉತ್ಪಾದನೆಯಿಂದ ಒಂದು ಪೂರಕ ಹಾಗು ಪರ್ಯಾಯ ಇಂಧನ ನಾವು ಪಡೆದುಕೊಳ್ಳುವಂತಾಗಿದೆ. ಈ ಇಂಧನ ಬಳಕೆಯಿಂದ ಸಾಕಷ್ಟು ಹಣ ಹಾಗು ಶ್ರಮ ಉಳಿತಾಯವಾಗುತ್ತದೆ. ಮಡಿವಂತಿಕೆಯನ್ನು ಬಿಟ್ಟು ವಾಸನೆ ರಹಿತ, ಪರಿಸರ ಸ್ನೇಹಿಯಾದ ಈ ಇಂಧನ ಬಳಕೆಗೆ ನಾವೆಲ್ಲ ಮನಸ್ಸು ಮಾಡಿದರೆ ಗೃಹೋಪಯೋಗಿ ಸಿಲಿಂಡರ್ ಗಳ ಬೇಡಿಕೆಯ ಕೊರತೆಯನ್ನು ನೀಗಿಸಬಹುದು. ದೊಡ್ಡ ಹೋಟೆಲ್, ಆಸ್ಪತ್ರೆ, ವಸತಿ ಗೃಹಗಳು, ಕಾರ್ಖಾನೆ, ಹಾಸ್ಟೆಲ್ ಗಳಲ್ಲಿ ಇದನ್ನು ಅಳವಡಿಸಲು ವ್ಯಾಪಕ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಅವಶ್ಯಕತೆ ಇದೆ.


ಶ್ರೀನಿವಾಸ ರೆಡ್ಡಿ
ಪಿ.ಜಿ.ಡಿ.ಜೆ.ಎಂ. ಪತ್ರಿಕೋದ್ಯಮ ವಿದ್ಯಾರ್ಥಿ
ಐ.ಎಂ.ಸಿ.ಆರ್. ಮಹಾವಿದ್ಯಾಲಯ ಹುಬ್ಬಳ್ಳಿ- ೨೯

ಮಾನವ ತ್ಯಾಜ್ಯ ಈ ಆಸ್ಪತ್ರೆಗೆ ಇಂಧನ ಮೂಲ.


ಮ್ಮ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ, ಇಂಧನ ಮೂಲವಾಗಿ ಇಡಿ ಆಸ್ಪತ್ರೆಗೆ ಬಳಸಿದವರು ಯಾರು ಗೊತ್ತೆ?

ಬನ್ನಿ..ಹುಬ್ಬಳ್ಳಿಯ ಪ್ರತಿಷ್ಠಿತ ಸುಶ್ರುತ ಆಸ್ಪತ್ರೆಗೆ. ವೈದ್ಯ ವಿಜ್ಞಾನಿ ಖ್ಯಾತ ರೋಗ ನಿದಾನ ಶಾಸ್ತ್ರಜ್ಞರಾಗಿ ನಾಡಿನ ಗಮನ ಸೆಳೆದಿದ್ದ ಸೃಜನ, ಸಜ್ಜನ ಡಾ.ಸ.ಜ.ನಾಗಲೋಟಿಮಠ ಅವರ ಪುತ್ರ, ಕಿವಿ, ಗಂಟಲು ಹಾಗು ಮೂಗು ತಜ್ಞ ಡಾ.ಉಮೇಶ ನಾಗಲೋಟಿಮಠ ಅವರೇ ಈ ವಿಶೇಷ ಪ್ರಯೋಗ ಮಾಡಿ ಗಮನ ಸೆಳೆದವರು.

ಇಲ್ಲಿಯ ವರೆಗೆ ನಾವು ಜಾನುವಾರುಗಳ ಸಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದಿಸಿ, ಬಳಸಿ ಅರಿತಿದ್ದೇವೆ. ಆದರೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ ಇಡೀ ಅಸ್ಪತ್ರೆಗೆ ನಿರಂತರ ಗ್ಯಾಸ್ ಪೂರೈಕೆ ಸಾದ್ಯವಾಗಿಸಿದ ಕೀರ್ತಿ ಡಾ. ಉಮೇಶ ನಾಗಲೋಟಿಮಠ ಅವರದ್ದು.
ಡಾ.ನಾಗಲೋಟಿಮಠ ಅವರಿಗೆ ಬಯೋ ಗ್ಯಾಸ್ ಉತ್ಪಾದನೆ ಮಾಡಲು ಸ್ಪೂರ್ತಿ ನೀಡಿದ್ದು ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಲೇಖನ. ಆ ನಂತರ ಅಂತರ್ಜಾಲವನ್ನು ಜಾಲಾಡಿ ಒಂದಿಷ್ಟು ಮಾಹಿತಿ ಕಲೆ ಹಾಕಿದರು. ನಂತರ ೫೦ ವರ್ಷಗಳ ಹಿಂದೆಯೇ ಶಿಗ್ಲಿಯ ಸ್ವಾಮೀಜಿಯೊಬ್ಬರು ಮಣ್ಣಿನ ಪೈಪ್ ಗಳನ್ನು ಬಳಸಿ ಈ ಪ್ರಯೋಗ ಕೈಗೊಂಡಿದ್ದ ಬಗ್ಗೆ ವಿಷಯ ತಿಳಿದಾಗಿನಿಂದ ಈ ಪ್ರಯೋಗನಾವೇಕೆ ಆಸ್ಪತ್ರೆಯಲ್ಲಿ ಮಾಡಬಾರದು ಅನಿಸಿತಂತೆ.

ಆಸ್ಪತ್ರೆಯಲ್ಲಾದರೆ ದಿನವೊಂದಕ್ಕೆ ೩೦೦ಕ್ಕಿಂತ ಅಧಿಕ ಜನರು ಕಕ್ಕಸವನ್ನು ಬಳಸುತ್ತಾರೆ. ಇದನ್ನು ಬಳಸುವ ಜನರ ಸಂಖ್ಯೆ ಕಡಿಮೆ ಇದ್ದಾಗ ಈ ಪ್ರಯೋಗ ಸಾಧ್ಯವಾಗಲಾರದು. ಜೈವಿಕ ಅನಿಲ ಉತ್ಪಾದನೆಯ ಸಾಧಕ ಹಾಗು ಬಾಧಕಗಳ ಅಧ್ಯಯನ ನಡೆಸಿದರು. ಗೋಬರ್ ಗ್ಯಾಸ್ ಉತ್ಪಾದನೆಯ ವೈಫಲ್ಯಕ್ಕೆ ಭೂಮಿಯ ಮೇಲೆ ರಚಿಸಲಾದ ಟ್ಯಾಂಕ್ ಗಳೇ ಮೂಲಕಾರಣ ಎಂದು ಅರಿತರು. ಈ ಟ್ಯಾಂಕ್ ಗಳು ತುಕ್ಕು ಹಿಡಿದು ಅಥವಾ ಸಣ್ಣ ಕೀಟಗಳು ಅದನ್ನು ತೂತು ಮಾಡಿ ಗ್ಯಾಸ್ ಅವ್ಯಾಹತವಾಗಿ ಸೋರುವ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಲೇ ಜನರಿಗೆ ಗೋಬರ್ ಗ್ಯಾಸ್ ನಿಂದ ದೀರ್ಘ ಕಾಲ ಗ್ಯಾಸ್ ಪೂರೈಕೆಯಾಗುವ ಬಗ್ಗೆ ಅಪನಂಬಿಕೆ ಹುಟ್ಟಿತ್ತು ಎನ್ನುತ್ತಾರೆ ಡಾ.ನಾಗಲೋಟಿಮಠ. ಈ ಕಾರಣದಿಂದಾಗಿಯೇ ಅವರು ತಮ್ಮ ಆಸ್ಪತ್ರೆಯಲ್ಲಿ ಚೀನಿ
ಮಾದರಿಯ 'ಅಂಡರ್ ಗ್ರೌಂಡ್ ಬಯೋಗ್ಯಾಸ್ ಟ್ಯಾಂಕ್' ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಲ್ಲಿ ನಿರ್ಮಿಸಿದ್ದಾರೆ.
ಮಾನವ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ವಿಧಾನದಲ್ಲಿ ತೊಟ್ಟಿಗೆ ಸೂರ್ಯನ ಕಿರಣಗಳು ಹಾಗು ಆಮ್ಲಜನಕದ ಪೂರೈಕೆ ನಿಷಿದ್ಧ. ಹಾಗಾಗಿ ಈ ಎರಡರ ಬಳಕೆ ವರ್ಜಿಸಿ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಮಾನವ ತ್ಯಾಜ್ಯ ತಾನಾಗಿಯೇ ಪೈಪ್ ಗಳ ಮೂಲಕ ಬಂದು ಈ ಅಂಡರ್ ಗ್ರೌಂಡ್ ತೊಟ್ಟಿಯಲ್ಲಿ ಶೇಖರಗೊಳ್ಳುತ್ತದೆ. ತೊಟ್ಟಿಯಲ್ಲಿ ತ್ಯಾಜ್ಯಗಳು 'ಸಾವಯವ ರೀತಿಯ ಸ್ಲರೀಕರಣ' ರೀತಿಯಲ್ಲಿ ಕರಗಿ ಮಿಥೇನ್ ಅನಿಲವಾಗಿ ಹೊರಹೊಮ್ಮುತ್ತದೆ. ಹೀಗೆ ಉತ್ಪಾದನೆಗೊಂಡ ಮೀಥೇನ್ ಅನಿಲವು ತೊಟ್ಟಿಯ ಮೇಲ್ಭಾಗದಲ್ಲಿರುವ ಕೊಳವೆಯ ಮೂಲಕ ಹೊರ ಬರುತ್ತದೆ. ಈ ಕೊಳವೆಯನ್ನು ಗ್ಯಾಸ್ ಒಲೆಗೆ ಜೋಡಿಸಲಾಗುತ್ತದೆ.
ಸ್ವಲ್ಪವೂ ವಾಸನೆ ಹೊಮ್ಮದ ಈ ಗ್ಯಾಸ್ ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಕುದಿಸಲು, ನೀರನ್ನು ಬಿಸಿ ಮಾಡಲು ಉಪಯೋಗಿಸಲಾಗುತ್ತದೆ ಎನ್ನುತ್ತಾರೆ ಡಾ.ನಾಗಲೋಟಿಮಠ.
ಈ ಜೈವಿಕ ಅನಿಲ ಉತ್ಪಾದನಾ ವಿಧಾನವನ್ನು ಅಳವಡಿಸಿಕೊಂಡಲ್ಲಿ ಹಲವಾರು ಪ್ರಯೋಜನಗಳಿವೆ. ನಿರ್ವಹಣಾ ವೆಚ್ಚ ತೀರ ಕಡಿಮೆ. ಡಾ.ಉಮೇಶ ಅವರು ವಿವರಿಸುವಂತೆ ಆಸ್ಪತ್ರೆಯ ಸೂರಿನ ಅಡಿ ೨ ಬಯೋ ಗ್ಯಾಸ್ ಟ್ಯಾಂಕ್ ನಿರ್ಮಿಸಲು ೭೦ ಸಾವಿರ ರುಪಾಯಿಗಳನ್ನು ವ್ಯಯಿಸಲಾಗಿದೆ. ಆದರೆ ಇದರಿಂದ ಆಸ್ಪತ್ರೆಗೆ ತಿಂಗಳಿಗೆ ೧೦ ರಿಂದ ೧೫ ಸಾವಿರ ರುಪಾಯಿಗಳ ಉಳಿತಾಯವಾಗುತ್ತದೆ. ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಕುದಿಸಲು ಹಾಗು ಪ್ರಯೋಗಾಲಯದಲ್ಲಿ ೧೨ ರಿಂದ ೧೪ ತಾಸುಗಳ ಕಾಲ ನಿರಂತರವಾಗಿ ಈ ಗ್ಯಾಸ್ ಉರಿಸಲಾಗುತ್ತಿದೆ. ಹಾಗೆಯೇ ಕಮೋಡ್ ಇರುವ ಶೌಚಾಲಯಗಳಲ್ಲಿ ನಿತ್ಯ ಒಂದು ಬಾರಿ ಫ್ಲಾಶ್ ಮಾಡಲಾಗಿ ಕನಿಷ್ಟ ೨೦ ರಿಂದ ೨೫ ಲೀಟರ್ ವ್ಯಯವಾಗುತ್ತದೆ. ಇದನ್ನು ಸಹ ತಕ್ಕ ಮಟ್ಟಿಗೆ ಕಡಿಮೆ ಗೊಳಿಸಿ ಜಲ ಪ್ರಬಂಧನೆಯ ಕುರಿತು ಸಹ ಪರಿಣಾಮಕಾರಿಯಾಗಿ ಹೆಜ್ಜೆ ಇಡಬಹುದಾಗಿದೆ.
ಅಲ್ಲದೇ ಈ ವಿಧಾನದಿಂದಾಗುವ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಮಾನವ ತ್ಯಾಜ್ಯದಲ್ಲಿರುವ ಕಾಲರಾ, ಟೈಫಾಯಿಡ್ ಮುಂತಾದ ರೋಗಗಳ ರೋಗಾಣುಗಳು ಈ ಸಂದರ್ಭದಲ್ಲಿ ಸತ್ತು ಹೋಗುತ್ತವೆ. ನಂತರ ಹೊರಬರುವ ಗ್ಯಾಸ್ ನಲ್ಲಿ ರೋಗ ಹರಡಬಹುದಾದ ರೋಗಾಣುಗಳ ಯಾವ ಸೋಂಕು ಇರುವುದಿಲ್ಲ. ತುಂಬ ಸರಳವಾದ ಈ ಜೈವಿಕ ಅನಿಲ ಉತ್ಪಾದನೆಗೆ ತಗಲುವ ವೆಚ್ಚ ಕಡಿಮೆ. ಡಾ. ನಾಗಲೋಟಿಮಠ ಈಗಾಗಲೇ ಅನೇಕರಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಈ ಪ್ರಯೋಗ ಕೈಗೊಳ್ಳಲು ಯಾರೂ ಮುಂದೆ ಬಂದಿಲ್ಲ ಎಂದು ವಿಷಾದಿಸುತ್ತಾರೆ.
ನಮ್ಮ ನಡುವೆಯೇ ಡಾ.ಉಮೇಶ ನಾಗಲೋಟಿಮಠ ಅವರಂತಹ ವಿಶಿಷ್ಠ ಪ್ರಯೋಗ ನಡೆಸಿದ ಸಾಧಕರಿದ್ದಾರೆ. ಆದರೆ ಆ ಸಾಧನೆ ಅಷ್ಟಾಗಿ ಬೆಳಕಿಗೆ ಬಂದಿರುವುದಿಲ್ಲ. ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಂತೆ ದೊಡ್ಡಾ ಆಸ್ಪತ್ರೆಗಳು ವಿದ್ಯಾರ್ಥಿ ನಿಲಯಗಳು, ಹೋಟೆಲ್ ಗಳು ಈ ವಿಧಾನವನ್ನು ಅನುಸರಿಸಿದಲ್ಲಿ ಇಂಧನ ಉಳಿತಾಯ ಮಾತ್ರವಲ್ಲದೇ ಹಣ ಉಳಿತಾಯವೂ ಸಾಧ್ಯವಾಗುತ್ತದೆ. ಹೀಗೆ ಉಳಿತಾಯವಾದ ಹಣ ಹೊಸ ಯೋಜನೆಗೆ ಬಂಡವಾಳವಾಗಬಲ್ಲದು. ಆದರೆ, ತೊಡಗಿಸಿಕೊಳ್ಳಬೇಕಾದ ಮನಸ್ಸು, ವಹಿಸಬೇಕಾದ ಶ್ರಮ, ಪರಿಸರದ ಪ್ರತಿ ಕಾಳಜಿ, ಪರಿಸರ ಸ್ನೇಹಿ ಪ್ರಯೋಗಗಳತ್ತ ಒಲವು ಮುಖ್ಯ ಅಲ್ಲವೇ?

ಸುಜಾತಾ ವಜ್ರಳ್ಳಿ
ಎಂ.ಎ.ಜೆ.ಎಂ. ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯