ತೋಳನಕೆರೆಯ ಅಳಲಿನ ಕಥೆ

Tuesday, February 24, 2009

ತೋಳನಕೆರೆಯು ಈಗ ನಾಡತೋಳಗಳ ದಾಳಿಗೆ ಸಿಲುಕಿ 'ತೋಳನಕೇರಿ' ಆಗುವತ್ತ ದಾಪುಗಾಲು ಇಡುತ್ತಿದೆ!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೩೫ನೇ ವಾರ್ಡಿನ ತೋಳನಕೆರೆಯ ಒಟ್ಟು ವಿಸ್ತೀರ್ಣ ೨೩ ಎಕರೆ, ೩೨ ಗುಂಟೆ.

ವಾಣಿಜ್ಯ ನಗರಿಯ ವಾಣಿಜ್ಯ ಪಟುಗಳ ಕಣ್ಣು ಕುಕ್ಕದಿರುತ್ತದೆಯೇ? ಕೆರೆಯ ಸುತ್ತಲೂ ವ್ಯವಸ್ಥಿತ ಬಡಾವಣೆ ನಿರ್ಮಾಣಗೊಂಡು ದಶಕವೇ ಉರುಳುತ್ತಿದೆ. ಅತಿಕ್ರಮಣದ ಪರಿಣಾಮವಾಗಿ ಸದ್ಯ ೧೦ ರಿಂದ ೧೨ ಎಕರೆಗಳಷ್ಟು ಮಾತ್ರ ಕೆರೆ ಉಳಿದಿದೆ. ಸುತ್ತಲೂ ಅಷ್ಟೇ ಅವ್ಯವಸ್ಥೆ ರಾರಾಜಿಸುತ್ತಿದೆ. ಬಡಾವಣೆಯ ಫಲವಾಗಿ ಗಬ್ಬೆದ್ದು ನಾರುವ ಹೊಲಸೆಲ್ಲವನ್ನು ತನ್ನ ಉದರದಲ್ಲಿ ತುಂಬಿಕೊಂಡು ಮೂಕ ವೇದನೆ ಕೆರೆ ಅನುಭವಿಸುತ್ತಿದೆ.


೧೯೮೦ರಲ್ಲಿ ಇದೊಂದು ನಯನಮನೋಹರ ಕೆರೆಯಾಗಿತ್ತು. ಈ ಕೆರೆಯ ನೀರನ್ನು ಸುತ್ತಲಿನ ಬಡಾವಣೆಗಳಲ್ಲಿ ಬಳಸಲಾಗುತ್ತಿತ್ತು. ಪಟ್ಟಣ ಬೆಳೆದಂತೆ ಕೆರೆಯ ಸುತ್ತಲೂ ವಸತಿ ಸಂಕೀರ್ಣ ನಿರ್ಮಾಣಗೊಂಡಿತು. ಈಗ ಅದು ಕೇರಿ. ರವಿ ನಗರ, ಬಸವೇಶ್ವರ ನಗರ, ಲಕ್ಷ್ಮೀ ನಗರ, ಮಠಪತಿ ಲೇಔಟ್, ರೇಣುಕಾನಗರ, ಗಾಂಧಿ ನಗರ, ವಿವೇಕಾನಂದನಗರ, ಸೆಂಟ್ರಲ್ ಎಕ್ಸೈಜ್ ಕಾಲೋನಿ, ನೆಹರೂ ನಗರ ಒಂದನೇ ಹಂತ, ಕುಮಾರ ಪಾರ್ಕ್, ಸನ್ಮಾರ್ಗ ನಗರ, ಕಲ್ಬುರ್ಗಿ ಲೇಔಟ್, ಪದ್ಮಾವತಿ ಹೌಸಿಂಗ್ ಸೊಸಾಯಿಟಿ, ಗಣೇಶ್ ಲೇಔಟ್ ಹೀಗೆ ಅನೇಕ ಬಡಾವಣೆಗಳ ಒಳಚರಂಡಿ ನೀರನ್ನು ತೋಳನಕೆರೆಗೆ ಹರಿ ಬಿಡಲಾಗುತ್ತಿದೆ. ಹೀಗಾಗಿ ಮೊದಲು ಉಪಯೋಗಿಸಲು ಯೋಗ್ಯವಾಗಿದ್ದ ನೀರು ಈಗ ಚರಂಡಿ ನೀರಾಗಿ ಪರಿವರ್ತನೆಗೊಳ್ಳುತ್ತಿದೆ. ಈ ನೀರಿನ ದುರ್ವಾಸನೆ ಹಾಗು ಅನಾರೋಗ್ಯಪೂರ್ಣಾ ವಾತಾವರಣದಿಂದಾಗಿ ಜನ ದವಾಖಾನೆಗೆ ನಿತ್ಯ ಎಡತಾಕುವಂತಾಗಿದೆ.


ತೋಳನಕೆರೆಯ ದಂಡೆಯ ಹತ್ತಿರವೇ ವಾಸವಾಗಿರುವ ಶ್ಯಾಮಲಾ ಅವರು ಹೇಳುತ್ತಾರೆ.."ಅಯ್ಯೋ..ಈಗ ಗಬ್ಬು ನಾಥ. ಮೊದಲು ನಾವೆಲ್ಲ ಕುಡಿಯಾಕ ಬಳಸ್ತಿದ್ವಿ. ಈಗ ಕಸ ಹಾಕೋ ತೊಟ್ಟಿ ಥರ ಆಗಿಹೋಗೇತಿ. ನಮ್ಮ ಜನಕ್ಕೂ ಕಾಳಜಿ ಅಷ್ಟಕ್ಕಷ್ಟ".
ಕಳೆದ ೪ ವರ್ಷಗಳಿಂದ ನಗರದ ವಿವಿಧ ಬಡಾವಣೆಗಳಿಂದ ಹೊತ್ತು ತರಲಾದ ಮಣ್ಣು, ಕಾಂಕ್ರೀಟ್ ತ್ಯಾಜ್ಯವನ್ನು ಕೆರೆಗೆ ಹಾಕಿ ಹೂಳು ತುಂಬುವಂತೆ ಸಹ ಮಾಡಲಾಗುತ್ತಿದೆ. ಕೆರೆಯ ಈ ದಯನೀಯ ಪರಿಸ್ಥಿತಿ ಗಮನಕ್ಕೆ ಬರುತ್ತಲೇ ಅವಳಿ ನಗರ ಪಾಲಿಕೆಯ ಅಂದಿನ ಆಯುಕ್ತರಾಗಿದ್ದ ಪಿ.ಮಣಿವಣ್ಣನ್ ಸ್ವತ: ಭೇಟಿ ನೀಡಿ, ಸಮೀಕ್ಷೆ ಕೈಗೊಂಡಿದ್ದರು. ಕೆರೆಯ ಪುನರುಜ್ಜೀವನಕ್ಕೆ ಕ್ರಿಯಾಯೋಜನೆ ಸಲ್ಲಿಸುವಂತೆ ಸ್ಥಳೀಯ ವಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಈ ನಿರ್ಣಯ ಕೈಗೊಂಡ ಒಂದೇ ವಾರದಲ್ಲಿ ಮೈಸೂರಿಗೆ ಅವರ ವರ್ಗಾವಣೆಯಾಯಿತು. ಇದು ಬಹುಶ: ಕೆರೆಯ ದುರ್ದೈವ.


ಈ ಕೆರೆಯನ್ನು ಭೂ ಮತ್ತು ವಿಜ್ಞಾನ ಇಲಾಖೆಯವರು (ಸದ್ಯ ೧೨) ಇಟ್ಟಂಗಿ ಭಟ್ಟಿಯವರಿಗೆ ಕರಾರಿನ ಮೇರೆಗೆ ಉಪಯೋಗಿಸಲು ನೀಡಿದ್ದರು. ಆದರೆ ಇಲ್ಲಿನ ಇಟ್ಟಂಗಿ ಭಟ್ಟಿಯವರು ಕರಾರು ಅವಧಿ ಮುಗಿದಿದ್ದರೂ ಕೆರೆಯ ಸುತ್ತಮುತ್ತಲೂ ಇಟ್ಟಂಗಿ ತಯಾರಿಸುವಲ್ಲಿ ಮಗ್ನರಾಗಿದ್ದಾರೆ.


ತೋಳನಕೇರಿಗೆ ಸೇರಿಸಲಾಗಿರುವ ಸುತ್ತಮುತ್ತಲಿನ ಬಡಾವಣೆಗಳ ಗಟಾರುಗಳನ್ನು ಬೇರೆಡೆ ತಿರುಗಿಸಿ ಕೆರೆ ಕಾಪಾಡುವಂತೆ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆಯ ಗಮನ ಸೆಳೆಯುವ ಪ್ರಯತ್ನ ಮತ್ತೊಮ್ಮೆ ಕೂಡ ಮಾಡಿದ್ದಾರೆ. ಪಾಲಿಕೆ ಮಾತ್ರ ಕೆರೆಯ 'ಪಾಲಕ'ನಾಗಲು ಸಿದ್ಧವಿಲ್ಲ. ಈ ಚರಂಡಿ ನೀರನ್ನು ಬೇರೆ ಮಾರ್ಗವಾಗಿ ಕೆರೆ ದಾಟಿಸಿ ಸಾಗುಹಾಕಿದ್ದಾದರೆ ಮರಣ ಶೆಯ್ಯೆಯಲ್ಲಿರುವ ಕೆರೆ ತುಸು ಚೇತರಿಸಿಕೊಳ್ಳಬಹುದು. ಸ್ಥಳೀಯರು ಕೂಡ ತಮ್ಮ ಕೈಜೋಡಿಸಲು ಸಿದ್ಧರಿದ್ದಾರೆ. ಪಾಲಿಕೆ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಯ ಪುನರುಜ್ಜೀವಕ್ಕೆ ಮುಂದಾಗಬೇಕಿದೆ. ಕೆರೆಗಳನ್ನು ಹಾಳುಗೆಡವಿ ಕೇರಿಗಳನ್ನು ಸುಲಭವಾಗಿ ನಿರ್ಮಿಸಬಹುದು. ಆದರೆ ಕೇರಿಗಳನ್ನು ಕೆರೆಗಳನ್ನಾಗಿ ಅಷ್ಟು ಸುಲಭವಾಗಿ ಪರಿವರ್ತಿಸಬಹುದೇ?
ಖ್ಯಾತ ಪರಿಸರವಾದಿ ಡಾ.ಶಿವರಾಮ ಕಾರಂತರು ಹೇಳುತ್ತಿದ್ದರು.."ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ" ಈ ಮಾತು ಇಂದಿಗೂ ಪ್ರಸ್ತುತ.

ಕೋಮಲ ರಾಜಶೇಖರ ಮೋಟಗಿ
ಪಿ.ಜಿ.ಡಿ.ಜೆ.ಎಂ. ೧ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಮಹಾವಿದ್ಯಾಲಯ- ಹುಬ್ಬಳ್ಳಿ- ೨೯.

0 comments:

Post a Comment